ಶುಕ್ರವಾರ, ಡಿಸೆಂಬರ್ 23, 2011

ಹಳ್ಳಿ ಶಾಲೆ ಮತ್ತು ಮಂಜಯ್ಯ ಮಾಸ್ತರರು



ನಮಸ್ಕಾರ ಸ್ಸಾ. . . .ರ್
ಡೊಳ್ಳು ಹೊಟ್ಟೆ, ಬೊಕ್ಕುತಲೆಯ ದಢೂತಿ ದೇಹದ ವ್ಯಕ್ತಿ ಬಂದಾಗ ಎಲ್ಲಾ ಮಕ್ಕಳು ಒಂದು ಬಾರಿ ನಿಶ್ಯಬ್ದರಾಗಿ ಹೇಳಿದ ಮಾತು!!!
ಆ ವ್ಯಕ್ತಿ ಬೇರಾರು ಅಲ್ಲ . . ಅವರೇ ನಮ್ಮ ಮಂಜಯ್ಯ ಮಾಸ್ತರರು. . .!! 

ಮರವಂತಿಗೆ ಕುದುರೆಮುಖ ಅಭಯಾರಣ್ಯದ ನಡುವೆ ಇರುವ ಕುಗ್ರಾಮ. . 
ನಡುವೆ ಕುದುರೆಮುಖದ ಪರ್ವತಗಳಿಲ್ಲದಿದ್ದರೆ ಈ ಗ್ರಾಮದಿಂದ ಕಳಸಕ್ಕೆ ಕೇವಲ ಎಂಟುಮೈಲಿ,ಆದರೆ ಈ ಪರ್ವತದಿಂದಾಗಿ ಬಸ್ಸು ಸುತ್ತು ಬಳಸಿ ಚಾರ್ಮಾಡಿ ಘಾಟಿಯಾಗಿ ಅರವತ್ತು ಮೈಲಿ ಕ್ರಮಿಸ ಬೇಕಾದ ಪರಿಸ್ಥಿತಿ. . 
ಹಿಂದೆ ಗ್ರಾಮಸ್ಥರು ಮಣ್ಣಿನ ರಸ್ತೆಯನ್ನು ಮರವಂತಿಗೆಯಿಂದ ಕಳಸಕ್ಕೆ ಹೋಗಲು ಬಳಸುತ್ತಿದ್ದರೂ ಈಗ ನಕ್ಸಲರ ಹಾವಳಿಯಿಂದ ಈ ರಸ್ತೆಯನ್ನು ಸಂಪೂರ್ಣ ಮುಚ್ಚಲಾಗಿದೆ. . .
ಕಳ್ಳಸಾಗಾಣಿಕೆಗೂ ಈ ರಸ್ತೆ ಹೆಸರುವಾಸಿ . . .!
ಕುದುರೆಮುಖ ಅಭಯಾರಣ್ಯದ ನಡುವೆ ಇರುವ ಒಂದು ಹಿಂದುಳಿದ ಸ್ಥಳವೆಂದರೆ ಸಂಸೆ. . . 
ಇಲ್ಲಿರುವುದು ಪ್ರಾಪಂಚಿಕ ಜ್ಞಾನದಿಂದ ಹೊರಗುಳಿದ ಬುಡಕಟ್ಟು ಜನಾಂಗ. . 
ಇವರು ಏನೇ ಕೆಲಸವಿದ್ದರೂ ಬರಬೇಕಾದದ್ದು ಎಂಟು ಮೈಲಿ ಕಾಲ್ನಡಿಗೆಯಲ್ಲಿ ಕಳಸ ಇಲ್ಲವೇ ಮರವಂತಿಗೆಗೆ. . 
ಇನ್ನು ಮಕ್ಕಳು ಹೆಚ್ಚಿನವರು ಶಾಲೆಯ ಮುಖ ನೋಡದಿದ್ದರೂ ಸರ್ಕಾರದ ಒತ್ತಾಯಕ್ಕೆ ಒಂದಿಬ್ಬರು ಮಣಿದು ಶಾಲೆಯ ಮತ್ತು ಶಿಕ್ಷಕರ ಯೋಗಕ್ಷೇಮವನ್ನು ವಿಚಾರಿಸಲು ಅಮವಾಸ್ಯೆಗೊಮ್ಮೆ ಹುಣ್ಣಿಮೆಗೊಮ್ಮೆ ಬರುತ್ತಿದ್ದರು!!
ಪಾಪ ಅವರಾದರೂ ಏನು ಮಾಡ್ಯಾರು ಎಂಟು ಮೈಲು ನಡೆಯ ಬೇಡವೇ???
ಇನ್ನೂ ಕೆಲವರ ಮನೆಯವರು  "ವಾ ಮಗೆ ಬರ್ಪೆ ತೂಕ"(ಯಾರು ಬರುತ್ತಾರೆ ನೋಡುವ) ಎಂದು ಜಗಳಕ್ಕೆ ಸನ್ನದ್ಧರಾಗಿದ್ದರು. . 
ಅವರ ಮಕ್ಕಳು ಶಾಲೆಗೆ ಹೋದರೆ,ಸೌದೆ ತರುವುದು,ಅವ್ರಿಗೆ ಕುಡಿಯಲು ತಂದು ಕೊಡುವುದ್ಯಾರು!!
ಇಲ್ಲಿಯೂ ಒಂದು ಸ್ವಾರ್ಥ್ಯ!!!
ಇವರು ಬರುತ್ತಿದ್ದ ಶಾಲೆಯ ಹಳ್ಳಿಯ ಮೇಷ್ಟ್ರೇ ಮಂಜಯ್ಯ ಮಾಸ್ತರರು. . .
ದಢೂತಿ ದೇಹವನ್ನು ಹೊತ್ತುಕೊಂಡು ೫೦ ವರ್ಷದ ಈ ಬ್ರಹ್ಮಚಾರಿ ಯುವಕ ಬರುತ್ತಿದ್ದದ್ದು ಎಂಟುಮೈಲಿ ದೂರದ ಕಳಸದಿಂದ!!
ಅದೂ ಕಲ್ನಡಿಗೆಯಲ್ಲಿ!!! ಅದೂ ಅಪರೂಪದಲ್ಲಿ!!
ಅಮವಾಸ್ಯೆ ಹುಣ್ಣಿಮೆಗೊಮ್ಮೆ ಬರುತ್ತಿದ್ದ ಮಕ್ಕಳು ಮತ್ತು ಮಾಸ್ತರರು ಒಂದೇ ದಿನ ಬಂದರೆಂದರೆ ಅದು ಬಹುದೊಡ್ಡ ಕಾಕತಾಳೀಯ.  .
ಪಾಪ ಕೆಲ ಮಕ್ಕಳಿಗೆ ಅವರೇ ಮೇಸ್ಟ್ರೆಂದು ತಿಳಿದೇ ಇರಲಿಲ್ಲ. . 
ನೋಡಿದರಲ್ವೇ ತಿಳಿಯುವುದು!!
ಅತ್ತ ಕರಾವಳಿಯೂ ಅಲ್ಲದ ಇತ್ತ ಮಲೆನಾಡೂ ಅಲ್ಲದ ಈ ಮರವಂತಿಗೆ ಪ್ರದೇಶದಲ್ಲಿ ಮಳೆಗಾಲದಲ್ಲಿ ಮಳೆ ಧಾರಾಕಾರವಾಗಿ ಸುರಿಯುತ್ತಿತ್ತು.  .
ಈ ಮಳೆಗಾಲದಲ್ಲಿ ತಿಂಗಳುಗಳ ಕಾಲ ರಜೆ. . .
ಇನ್ನು ಮಳೆ ಪ್ರಾರಂಭ ಕಾಲದಲ್ಲಿ ಮತ್ತೆ ಒಂದು ತಿಂಗಳ ರಜೆ ಕಾರಣ ಗದ್ದೆ ನಾಟಿ!!
ಈ ಗದ್ದೆ ನಾಟಿಯಲ್ಲಿ ಶಿಕ್ಷಕರು ಮತ್ತು ಮಕ್ಕಳೂ ಬ್ಯುಸಿಯಾಗಿರುತ್ತಿದ್ದರು, , ,
ಈ ಕಾಲದಲ್ಲಿ ಶಾಲೆಗೆ ತಾತ್ಕಾಲಿಕ ಬೀಗ!!
ಮಳೆ ಬಿಟ್ಟ ಮೇಲೆ ಕುಯ್ಲಿಗಾಗಿ ಮತ್ತೆ ಒಂದು ತಿಂಗಳ ಚಕ್ಕರ್!!
ಶಾಲೆ ಇರುತ್ತಿದ್ದದ್ದು ಹೆಚ್ಚೆಂದರೆ ಒಂದು ತಿಂಗಳು. . !!
ಇನ್ನು ಈ ಸರ್ಕಾರ ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚಿದರೆ ಅವರು ಹೋಗಬೇಕಾದದ್ದು ದೂರದ ಬೆಳ್ತಂಗಡಿ ನಗರಕ್ಕೆ. . .
ಮರವಂತಿಗೆಗೇ ಬರಲು ಪರದಾಡುವ ಮಕ್ಕಳು ಬೆಳ್ತಂಗಡಿಗೆ ಬಂದಾರೇ????
ಇಷ್ಟು ಕಷ್ಟ ಪಟ್ಟು ಓದುವ ಛಲ ಹೊಂದಿರುವ ಮಕ್ಕಳು ಏನಾಗಬಲ್ಲರು???
ಗದ್ದೆ ನಾಟಿಯನ್ನೇ??? ಅಥವ ದೇಶದ ಈ ಪರಿಸ್ಥಿತಿಯನ್ನು ಬದಲಾಯಿಸುವ  ವ್ಯಕ್ತಿಯೋ???!!!

ಸೋಮವಾರ, ಡಿಸೆಂಬರ್ 19, 2011

ಅಲೆತ


ಹಾಸ್ಟೆಲ್ನಲ್ಲಿ ರೂಮಿನಲ್ಲೇ ಕಾಲ ಕಳೆಯುವ ನಾನು ಮನೆಗೆ ಬಂದಾಕ್ಷಣ ನನ್ನ ಅಲೆತ ಪ್ರಾರಂಭವಾಗಿ ಬಿಡುತ್ತದೆ. . 
ಪಶ್ಚಿಮಘಟ್ಟದ ತಪ್ಪಲಲ್ಲಿರುವ ಮೂಡಿಗೆರೆಯಲ್ಲಿ ಅಲೆಯಲು ಸ್ಥಳಗಳ ಕೊರತೆಯೇನಿಲ್ಲ. . .
ಸುತ್ತಮುತ್ತ ಹಳ್ಳಿಗಳಿರುವ ಈ ಮೂಡಿಗೆರೆಯಲ್ಲಿ ಕಾಫಿತೋಟ. . ಕೆಳಗೂರಿನ ಚಹ ತೋಟ. . .
ಚಾರ್ಮಾಡಿ ಘಾಟಿ ಇತ್ಯಾದಿಗಳನ್ನು ಗೆಳೆಯ ರಾಘವೇಂದ್ರನೊಂದಿಗೆ ಸುತ್ತುವ ಮಜವೇ ಬೇರೆ. . .
ಈ ಮಲೆನಾಡಿನಲ್ಲಿ ಮಳೆಗಾಲದಲ್ಲಿ ರಚ್ಚೆ ಹಿಡಿದು ಸುರಿಯುವ ಮಳೆಯನ್ನು ನೋಡುವಾಗ ನಮ್ಮ ಕಾಯ್ಕಿಣಿಯವರ ಮಳೆಯಸಾಲುಗಳು ನೆನಪಾಗುತ್ತದೆ. . 
ಕುವೆಂಪುರವರ ಪ್ರಾಕೄತಿಕ ವರ್ಣನೆಗಳನ್ನು ಅನುಭವಿಸಬೇಕಾದರೆ ನೀವು ಮಲೆನಾಡಿಗೆ ಬರಬೇಕು ಸ್ವಾಮಿ!!
ಅದಕ್ಕೇ ಇರಬೇಕು ತೇಜಸ್ವಿಯವರು ಮೂಡಿಗೆರೆಯನ್ನು ಆರಿಸಿಕೊಂಡದ್ದು. . .
ಇನ್ನು ಚಳಿಗಾಲದ ಅನುಭವವನ್ನು ನೀವೇ ಬಂದು ಅನುಭವಿಸಬೇಕು. . .!
ಇನ್ನು ಈ ನನ್ನ ಅಲೆತದಲ್ಲಿ ನನ್ನ ಸೈಕಲ್‍ನ ಪಾತ್ರವನ್ನು ಹೇಳದೇ ಇದ್ದರೆ ಅದು ಪಾಪ ಮುನಿಸಿಕೊಂಡಿತೋ ಏನೋ!!
ಯಾವುದೇ ಗದ್ದೆ ಗುಡ್ಡಗಳನ್ನು ಏರುವಲ್ಲಿ ನಮ್ಮ ಜೊತೆಗೂಡುವ ಸೈಕಲ್‍ನ ಸ್ಥಾನವನ್ನು ಬೈಕ್ ನಿಭಾಯಿಸಲು ಸಮರ್ಥವಾಗಿದೆಯೇ??
ನಮ್ಮ ಅನುಭವದ ಕೆಲವು ತುಣುಕುಗಳನ್ನು ಕೆಳಗೆ ನೀಡಿದ್ದೇನೆ(ಕೆಲವನ್ನು ಮೊದಲೇ ಫೇಸ್ಬುಕ್ನಲ್ಲಿ ಹಾಕಿದ್ದೆ). . .ಹೇಗನ್ನಿಸಿತು ನಿಮಗೆ??ಹೇಳಲು ಮರೆಯದಿರಿ!!
ಪ್ರಕೄತಿಯನ್ನು ಸೆರೆ ಹಿಡಿಯುವ ಪ್ರಯತ್ನ : ಹರಿಪ್ರಸಾದ್ :) 
ಕೆಳಗೂರು ಎಸ್ಟೇಟ್

ದುರ್ಗದ ಹಳ್ಳಿ

ದುರ್ಗದ ಹಳ್ಳಿ


ದುರ್ಗದ ಹಳ್ಳಿ


ದುರ್ಗದ ಹಳ್ಳಿ


ದುರ್ಗದ ಹಳ್ಳಿ


ಕೆಳಗೂರು ಎಸ್ಟೇಟ್


ಕೆಳಗೂರು ಎಸ್ಟೇಟ್


ದುರ್ಗದ ಹಳ್ಳಿ
ದುರ್ಗದ ಹಳ್ಳಿ


ಬೀಜುವಳ್ಳಿ

ಬೀಜುವಳ್ಳಿ

ಬೀಜುವಳ್ಳಿ

ಬೀಜುವಳ್ಳಿ

ಕುದ್ರೆಗುಂಡಿ


ಮುತ್ತಿಗೆಪುರ

ಹಳೇಮೂಡಿಗೆರೆ
ಮುತ್ತಿಗೆಪುರ





ಈಗ ಹೇಳಿ . . .ಮಲೆನಾಡಿಗೆ ಬರಲೇ ಬೇಕೆಂದೆನಿಸುತ್ತಿಲ್ಲವೇ????

ಶನಿವಾರ, ಡಿಸೆಂಬರ್ 17, 2011

'ಕಾಡಿನ ಸಂತ ತೇಜಸ್ವಿ'

ಚಿತ್ರ ಕೄಪೆ:ಅಂತರ್ಜಾಲ


ರಜೆಗೆ ಮನೆಗೆ ಬರುವಾಗ ನಾನು ಮೊದಲು ಹೋಗುವುದು ಅಪ್ಪನ ಆಫೀಸಿಗೆ. . .
ಅಲ್ಲಿ ಮೊದಲು ಕಣ್ಣಾಡಿಸುವುದು ಅವರ ಪುಸ್ತಕದ ಕಬೋರ್ಡಿಗೆ. .
ಸಾಮಾನ್ಯವಾಗಿ ಉಪನ್ಯಾಸ ಇತ್ಯಾದಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ತಂದೆಯವರಿಗೆ ಅನೇಕ ಅಮೂಲ್ಯ ಪುಸ್ತಕಗಳು ಉಡುಗೋರೆಯಾಗಿ ಸಿಕ್ಕಿರುತ್ತದೆ . . .
ಈ ಬಾರಿ ಎಂದಿನಂತೆ ಬಂದು ಕಣ್ಣಾಡಿಸಿದಾಗ ಸಿಕ್ಕ ಪುಸ್ತಕ ಜೀವಾಳರ 'ಕಾಡಿನ ಸಂತ ತೇಜಸ್ವಿ'. . .
ಈ ತೇಜಸ್ವಿ ಎಂಬ ಪದವನ್ನು ನೋಡಿದ ಮೇಲೆ ತಡೆಯಲಾರದ ಕುತೂಹಲ ನನ್ನಲ್ಲಿ ಆವರಿಸಿಬಿಟ್ಟಿತು. . .
ತೇಜಸ್ವಿ ಅವರ ಕೄತಿಗಳೇ ಹಾಗೆ ನೀವು ಒಂದು ಪುಟ ಓದಿದರೆ ಸಾಕು ಕೊನೆಯ ಪುಟದವರಗೆ ಓದುವತನಕ ಪುಸ್ತಕ ಬಿಟ್ಟು ಏಳಲು ಮನಸ್ಸು ಬರುವುದಿಲ್ಲ . .
ತೇಜಸ್ವಿಯವರು ಬರೆದ ಕೄತಿಗಳಂತೂ ವೈಜ್ಞಾನಿಕ . . .
ಇನ್ನು ಅವರ ಜೀವನ ಶೈಲಿ ,ಅವರ ಸಂಭಾಷಣೆಗಳನ್ನು ಓದುವುದು ಇನ್ನೂ ಚಂದ. . .
ಅವರ ಜೀವನ ಶೈಲಿಯೇ ಅಂತದ್ದು ನೋಡಿ. . .
ಅವರೊಂದಿಗೆ ನೀವು ಒಮ್ಮೆ ಮಾತಾಡಿದ್ದರೆ ಸಾಕು ಅದನ್ನು ನೀವು ಜೀವಮಾನವಿಡೀ ಮರೆಯುವ ಹಾಗಿಲ್ಲ. . .
ಯಾವುದಾದರೂ ಮಹಾನ್ ವ್ಯಕ್ತಿಗಳೊಡನೆ ಸಮಯ ಕಳೆಯುವ ಅವಕಾಶ ನಮಗೆ ಒದಗಿ ಬಂದರೆ ಅದು ನಮ್ಮ ಭಾಗ್ಯ .  .
ಅಂತಹಾ ಭಾಗ್ಯ ನನಗೊಂದು ಬಾರಿ ಒದಗಿಬಂತು. . .
ನಾನು ನಾಲ್ಕನೇ ತರಗತಿಯಲ್ಲಿದ್ದಾಗ ಹೋದ ಎರಡು ಚಾರಣ ಮರೆಯಲಸಾದ್ಯ . .  .
ಕಾರಣ ನಾನು ಚಾರಣ ಹೋದದ್ದು ನನ್ನ ನೆಚ್ಚಿನ ಲೇಖಕ ತೇಜಸ್ವಿಯೊಂದಿಗೆ.  .
ಜೀವಾಳರ ನೇಚರ್ ಕ್ಲಬ್ ಆಯೋಜಿಸಿದ್ದ ಚಾರಣಕ್ಕೆ ತಂದೆಯೊಂದಿಗೆ ನಾನು ಹೋಗಿದ್ದೆ. . .
ಎತ್ತಿನ ಭುಜ ಮತ್ತು ಗವಿ ಗುಡ್ಡ ಕಾಡಿಗೆ ಹೋಗಿದ್ದ ಚಾರಣ ನಿಜಕ್ಕೂ ಅವಿಸ್ಮರಣೀಯ , , , ಕಾರಣ ತೇಜಸ್ವಿ. . .!
ಆ ವ್ಯಕ್ತಿ ಸರಳ ಸಜ್ಜನ ವ್ಯಕ್ತಿ . . .
ಕಾಡಿನಲ್ಲಿ ಸಂಚರಿಸುತ್ತ ಬೇಸತ್ತಿದ್ದ ನಮಗೆ ತೇಜಸ್ವಿಯವರ ಸಮಯೋಚಿತ ಹಾಸ್ಯ ನಮ್ಮ ಆಯಾಸವನ್ನು ಮರೆಯಿಸುತ್ತಿತ್ತು.  . . .
ಅವರ ಸಂಭಾಷಣೆ ಹೇಗೆ ನನ್ನಲ್ಲಿ ಅಚ್ಚಳಿಯದೆ ಉಳಿದಿದೆ ಎಂದರೆ ನಾವು ಎತ್ತಿನ ಭುಜ ಚಾರಣದಿಂದ ಹಿಂದೆ ಬರುವಾಗ ಅವರು ಮರದ ಬುಡ್ಡೆಯಮೇಲೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದಾಗ ಯಾರೊ ಫೊಟೋ ಕ್ಲಿಕ್ಕಿಸಲು ಹೋದಾಗ ತೇಜಸ್ವಿ" ಈ ಫೊಟೋನ ನೋಡಿ ಯಾವನೋ ಮುದುಕ ಸತ್ತ್ ಬಿದ್ದಿದಾನೆ ಅಂತ ತಿಳ್ಕಳ್ಬೋದು ಮಾರಾಯಾ" ಎಂದಿದ್ದರು. . .
ಹೇಗೆ ಅವರ ಮಾತಿನಲ್ಲಿ ಹಾಸ್ಯ ತುಂಬಿತ್ತೋ ಹಾಗೇ ಮುಂಗೋಪಿ ಕೂಡಾ. . .
ಏನಾದರೊಂದು ಎಡವಟ್ಟು ಮಾಡಿಸಿಕೊಂಡು ಬೈಯಿಸಿಕೊಂಡವರ ಸಂಖ್ಯೆಯೇ ಹೆಚ್ಚು. . . !
ಇದೆಲ್ಲಾ ನೆನಪಾದದ್ದು ಮೊನ್ನೆ ನಾನು ಹಳೇಕೋಟೆ ರಮೇಶ್ ಅವರ ಒಂದು ಪುಸ್ತಕದಲ್ಲಿ ಇದ್ದ ಚಾರಣಕ್ಕೆ ಹೋದ ತಂಡದ ಗುಂಪು ಛಾಯಾಚಿತ್ರವನ್ನು ನೋಡಿದಾಗ. . .
ಅದರಲ್ಲಿದ್ದ ನನ್ನನ್ನು ನೋಡಿ ಅದು ನಾನೆ? ಎಂಬ ಅನುಮಾನ. . .ಅದರೊಂದಿಗೆ ಈ ಸವಿನೆನಪು :)
ಛೇ!! ನಾನು ಎಲ್ಲಿಂದ ಎಲ್ಲಿಗೆ ಹೋಗಿಬಿಟ್ಟೆ ನೋಡಿ . . .
ನಾನು ಬರೆಯಲು ಪ್ರಾರಂಭಿಸಿದ್ದು ಜೀವಾಳರ ಕೄತಿಯ ಬಗ್ಗೆ. . .
ಬರೆಯುತ್ತಿರುವುದು ನನ್ನ ಚಾರಣದ ಬಗ್ಗೆ. . .
ಇನ್ನು ಕೄತಿ ವಿಮರ್ಷೆಮಾಡಲು ನಾನೇನು ಅಷ್ಟು ದೊಡ್ಡವನಲ್ಲ ;)
ಇದು ನನ್ನ ಅನಿಸಿಕೆ. . .
ಚಿಕ್ಕವನಾಗಿದ್ದಾಗಿನಿಂದಲೂ ಪರಿಚಯವಿರುವ ಧನಂಜಯ ಜೀವಾಳರು ನಿಜಕ್ಕೂ ಪ್ರತಿಭಾವಂತರು. . .
ಅವರು ತಂದೆಯವರಿಗೆ ಕಳಿಸುವ ಶುಭಾಷಯ ಪತ್ರಗಳಂತೂ ನಿಜಕ್ಕೂ ಅದ್ಭುತ . . .
ಮೊನ್ನೆ ಊರಿಗೆ ಬಂದ ನಾನು ನಿನ್ನೆ ಸಂಜೆಯೇ ಆ ಪುಸ್ತಕವನ್ನು ಓದಿ ಮುಗಿಸಿದೆ. . .
ತೇಜಸ್ವಿಯವರೊಂದಿಗಿನ ಅನುಭವವನ್ನು ಬಹಳಾ ಚೆನ್ನಾಗಿ ಚಿತ್ರಿಸಿದ್ದಾರೆ. . .
ತೇಜಸ್ವಿಯವರ ಬಗ್ಗೆ ನಮಗೆ ಇನ್ನಷ್ಟು ತಿಳಿಸಿ ಕೊಟ್ಟ ಜೀವಾಳರೆ ನಿಮಗೆ ದನ್ಯವಾದಗಳು. . .
ನಿಮ್ಮ ಸಾಹಿತ್ಯ ಲೋಕದ ಹಾದಿ ಸುಗಮವಾಗಿರಲಿ. . !



ಶನಿವಾರ, ನವೆಂಬರ್ 12, 2011

ಗಿಂಡಿಮಾಣಿ



ನನ್ನ ಮನಸ್ಸು ಅನ್ನೋದೇ ಹೀಗೆ ನೋಡಿ. . .
ಒಮ್ಮೆ ಎನಾದರೂ ಮಾಡಬೇಕೆಂದುಕೊಳ್ಳುತ್ತೆ ಮತ್ತೆ ಇನ್ನೇನಾದರೂ ಮಾಡಿ ಬಿಡುತ್ತೆ. . 
ಈಗ ನಾನು assignment ಮಾಡಬೇಕು ಅಂತ laptop ತೆಗೆದು ಈಗ ಬ್ಲಾಗ್ ಬರಿಯುತ್ತಿದ್ದೇನೆ. . 
ಹೀಗೇ ಕ್ಲಾಸ್‌ನಲ್ಲಿಕೂಡ. .
ಗಮನವಿಟ್ಟು ಪಾಠಕೇಳಬೇಕೆಂದುಕೊಂಡರೆ ಮತ್ತೆ ನನ್ನ ಮನಸ್ಸು ಬೇರೆ ಏನನ್ನೋ ಯೊಚಿಸಲು ಪ್ರಾರಂಭಿಸಿ ಬಿಡುತ್ತೆ. . .
ಹುಚ್ಚು ಮನಸ್ಸು!!!
ಮತ್ತೆ ಹುಚ್ಚು ಮನಸ್ಸಿನ ಬಗ್ಗೆ ಪುರಾಣವೇ ಎಂದು ಕೇಳಬೇಡಿ,. . .
ಇದು ನನ್ನ ಹುಚ್ಚು ಮನಸ್ಸಿನ ಸಮಸ್ಯೆ. . 
ತನ್ನ ಬಗ್ಗೆ ಹೊಗಳಿಕೊಳ್ಳುವ ಒಂದು ಹುಚ್ಚು ಆಸೆ!!
ಮನಸ್ಸು ಹೇಳಿದಂತೆ ಕೇಳುವ ಗಿಂಡಿಮಾಣಿ ನಾನು. . .!
ಇನ್ನೂ ಒಂದು ಒಳ್ಳೆ ಉದಾಹರಣೆ ಎಂದರೆ ನನ್ನ ಹವ್ಯಾಸಗಳ ವಲಸೆ. . .
ಕೆಲವರು ಒಂದು ಊರು ಹಿಡಿಸದ್ದರೆ ಬೇರೆ ಊರಿಗೆ ವಲಸೆ ಹೋದಂತೆ ನನ್ನ ಹವ್ಯಾಸಗಳ ವಲಸೆ ಬಹಳವಿತ್ತು. . .
ಚಂಚಲ ಮನಸ್ಸಿನ ನಾನು ಸಾದಾರಣವಾಗಿ ಎಲ್ಲ ಕಲೆಗಳ ಪರಿಚಯಮಾಡಿಕೊಂಡವನು. . . 
ನಾನು ಸಣ್ಣವಯಸ್ಸಿನಲ್ಲೆ ಚಿಕ್ಕಮ್ಮನೊಂದಿಗೆ ಶಾಸ್ತ್ರೀಯ ಸಂಗೀತ ತರಗತಿಗೆ ಹೋಗಿ ಕೊಂಡಿದ್ದೆ ಮುಂದೆ ಕಾರಣಾಂತರದಿಂದ ಎರಡನೇತರಗತಿಗೆ ಮೂಡಿಗೆರೆಗೆ ಹೋಗಬೇಕಾಗಿ ಬಂದಿತು . . .
ಅಲ್ಲಿ ನಾನು ಅಪ್ಪ ಬರೆದು ಕೊಡುತ್ತಿದ್ದ ಭಾಷಣವನ್ನು ಓದಿ ನಾಲ್ಕನೇ ತರಗತಿಯವರಗೆ ಭಾಷಣ ಕಲೆಯನ್ನು ಕಲಿತುಕೊಂಡೆ. . .
ಮುಂದೆ ಐದನೇ ತರಗತಿಗೆ ಅಜ್ಜಿ ಮನೆಗೆ ಬಂದೆ ಆಗ ನನಗೆ ಶುರುವಾದದ್ದು ವಯೋಲಿನ್ ಹುಚ್ಚು . . . 
ವಯೋಲಿನ್ ತರಗತಿಯನ್ನು ಆರನೇತರಗತಿಗೆ ಬೆಳ್ತಂಗಡಿಗೆ ಬಂದ ಮೇಲೂ ಏಳನೇ ತರಗತಿಯವರೆಗೂ ಮುಂದುವರಿಸಿದರೂ ಏಳನೇತರಗತಿಗೆ ಗುರುಗಳ ಕೊರತೆಯಿಂದ ಅದನ್ನೂ ಕೈ ಬಿಡಬೇಕಾಗಿ ಬಂತು. . 
ಮುಂದೆ ಅದೇ ಶಾಲೆಯಲ್ಲಿದ್ದ ಕರಾಟೆ ತರಗತಿಗೆ ಸೇರಿದ ನಾನು ಅಲ್ಲಿ ತಿಂದ ಒಂದು ಹೊಡೆತದಿಂದ ಬದುಕಿದೆಯಾ ಬಡ ಜೀವವೇ ಎಂದುಕೊಳ್ಳುತ್ತಾ ಮತ್ತೆಂದೂ ಅತ್ತ ತಲೆ ಹಾಕದವನು. . .
ಇನ್ನು ಎಂಟನೇ ತರಗತಿಗೆ ಆಂಗ್ಲಮಾಧ್ಯಮ ಶಾಲೆ ಸೇರಿದ ನಾನು ಕಬ್ಬಿಣದ ಕಡಲೆಯಂತಿದ್ದ ಇಂಗ್ಲೀಷನ್ನುಕಂಡು ಬೆವತುಕೊಂಡೆನಾದರೂ ಅಲ್ಲೂ ನನ್ನ ಹುಚ್ಚು ಮನಸ್ಸು ಏನಾದರೂ ಮಾಡಬೇಕೆಂದು ಕೊಂಡು ಭರತನಾಟ್ಯಕ್ಕೆ ಸೇರಿಕೊಂಡೆ. . . 
ಅಲ್ಲಿದ್ದದ್ದು ಕೇವಲ ನಾನೊಬ್ಬನೇ ಹುಡುಗ. . . .!
 ಎರಡು ಮೂರು ತಿಂಗಳು ತರಗತಿಗೆ ಹೋದ ನಾನು ಮುಂದೆ ನಾನು ಮುಜುಗರಕ್ಕೊಳಗಾಗಿ ಅದನ್ನೂ ಕೈ ಬಿಟ್ಟೆ . . .
ಹತ್ತನೇ ತರಗತಿಗೆ ಮತ್ತೆ ಒಂದು ಹುಚ್ಚು ಸಾಹಸ!
ಎರಡು ವರ್ಷ ಆಂಗ್ಲಮಾದ್ಯಮಕ್ಕೆ ಹೋದ ನಾನು ಹತ್ತನೇತರಗತಿಗೆ ಕನ್ನಡ ಮಾಧ್ಯಮ ಶಾಲೆಗೆ ಸೇರಿದೆ!!!
ಇನ್ನು ಪಿ ಯು ಸಿ ಯನ್ನು ಹಾಸ್ಟೆಲ್‍ನಲ್ಲಿ ಕಳೆದ ನನ್ನ ಹುಚ್ಚು ಸಾಹಸಗಳೆಲ್ಲ ಸಾದಾರಣವಾಗಿ ನಿಂತು ಹೋಯಿತು. . .
ಪಿ ಯು ಸಿ ರಜೆಯಲ್ಲಿ ಚಿತ್ರಕಲೆಗೆ ಕೈ ಹಾಕಿ ಮತ್ತೆ ಕೈ ಹಿಂತೆಗೆದುಕೊಂಡೆ . ..
ಇನ್ನು ನಾಟಕ ಕಲೆನನ್ನ ನೆಚ್ಚಿನ ಕಲೆ. .. 
ಅದಕ್ಕೆ ಯಾರು ಗುರುಗಳು ಬೇಕಿಲ್ಲ ನನಗೆ!
ನೀವು ನನ್ನ ಲೇಖನವನ್ನು ಸೂಕ್ಷ್ಮವಾಗಿ ಗಮನಿಸಿದ್ದರೆ ಒಟ್ಟು ನಾನು ಬದಲಿಸಿದ ಶಾಲೆಗಳ ಸಂಖ್ಯೆ ಈಗದ್ದೂ ಸೇರಿ ೮. .  
ಈಗ ಹೇಳಿ ನಿಮಗೆ ನಾನು ಅಲೆಮಾರಿಯಂತನಿಸುತ್ತಿಲ್ಲವೇ??????!!!! 

ಸೋಮವಾರ, ಅಕ್ಟೋಬರ್ 31, 2011

ಎನ್ನುಸಿರು ಕನ್ನಡ



ಸಿರಿಗನ್ನಡಂ ಗೆಲ್ಗೆ  ಸಿರಿಗನ್ನಡಂ ಬಾಳ್ಗೆ. . .  
ಇಂದು ಕನ್ನಡ ರಾಜ್ಯೋತ್ಸವ . . .
ಕಂಗ್ಲೀಷನ್ನು  ಮಾತೃಬಾಷೆಯಾಗಿಸಿಕೊಂಡ  ವಿಶಾಲ ಹೃದಯಿಗಳ ಹಬ್ಬ  . . . .
ಕನ್ನಡಕ್ಕಿಂತ ಚೆನ್ನಾಗಿ ಇಂಗ್ಲಿಷ್ ಮಾತನಾಡುವ ವಿಶಾಲ ಹೃದಯದ ಕನ್ನಡಿಗರು ಕನ್ನಡ ಮಾತನಾಡುವವರನ್ನು ಕಂಡರೆ ಏಕೋ ಅಷ್ಟಕ್ಕಷ್ಟೇ . . .
ತಮಗೆ ಕೆಲಸ ನೀಡಿದ infi ನಾರಾಯಣ ಮೂರ್ತಿ ,ಮ್ಯಾಗಸ್ಸ್ಯೆ  ಪ್ರಶಸ್ತಿ ವಿಜೇತ ಹರೀಶ್ ಹಂದೆ ಮುಂತಾದವರೆಲ್ಲ ನಮ್ಮಂತೆ ಸಾಮಾನ್ಯ ಕನ್ನಡಿಗರು ಎಂಬುದನ್ನು ಮರೆತೆವೇನು ?
ಇದ್ದ ಕನ್ನಡದ ಒಂದೆರಡು ಶಾಲೆಗಳನ್ನು ಮುಚ್ಚಿ ಅದಕ್ಕೆ ವಿದ್ಯಾರ್ಥಿಗಳ ಕೊರತೆ ಕಾರಣ ಎಂದು ಸಬೂಬು ನೀಡುವ ನಾವು ಅಮೆರಿಕ ಕೇಳುವ ವಿದ್ಯಾವಂತ ಇಂಜಿನಿಯರ್ ಗಳು ಕಲಿತದ್ದು ಈ ಕನ್ನಡ ಮಾಧ್ಯಮ ಶಾಲೆ ಗಳಲ್ಲಿ ಎಂಬುದು ನಮಗೆ ತಿಳಿದಿಲ್ಲವೇನು?  
ನಮ್ಮ ಮುಖ್ಯಮಂತ್ರಿಗಳನ್ನೇ  ಜೈಲಿಗೆ ಅಟ್ಟಿ ನಮ್ಮ ರಾಜ್ಯ ಅತ್ಯಂತ ಭ್ರಷ್ಟ ರಾಜ್ಯ ಎಂದು ಡಂಗೂರ ಸಾರುವ ನಾವು ಕನ್ನಡಿಗರು . . 
ಅಪ್ಪ ಅಮ್ಮ ಚಿಕ್ಕಮ್ಮ ದೊಡ್ಡಮ್ಮ ಎಂಬ ಸಂಬಂಧ ಕಳೆದು ಕೊಂಡು ಮೊಮ್ ಡ್ಯಾಡ್ ಅಂಕಲ್ ಆಂಟಿಗಳ ಮೊರೆ ಹೋಗಿರುವ ನಾವು ಎಷ್ಟು ಭಾವನಾತ್ಮಕ ವಾಗಿ ಬೆಸೆದು ಕೊಳ್ಳಲು ಸಾದ್ಯ . . .
ಕುವೆಂಪು ,ಬೇಂದ್ರೆ,ಕಾರಂತರಂತಹ ಮಹಾನ್  ಬರಹಗಾರರ ಬಗ್ಗೆ ಗೊತ್ತಿರದ ಕನ್ನಡದ ಕೂಸುಗಳಿಗೆ  ಟೈಟಾನಿಕ್ ಕಥೆ  ಒಂದಕ್ಷರ ತಪ್ಪಿಲ್ಲದೆ ಹೇಳುವ ಕಲೆ ಒಗ್ಗಿದೆ !!!
ಬೆಂಗಳೂರಿನ ವಿಧಾನ ಸೌಧ ಗೊತ್ತಿಲ್ಲದಿದ್ದರೂ ವೈಟ್ ಹೌಸ್ ಬಗ್ಗೆ ವಿವರಿಸುವವನೆ ನಮ್ಮ ಕನ್ನಡಿಗ ಸತ್ಪ್ರಜೆ !!!!
ಇನ್ನು ಮುಂದೆ ಯಾವಾಗಲಾದರೂ ನಮ್ಮ ಕನ್ನಡಿಗರು ಸುಧಾರಿಸಿ ನಮ್ಮ ಕನ್ನಡ ವಿಶ್ವದ ಪರಿಚಿತ ಭಾಷೆಯಾಗಲಿ ಎಂದು ಆಶಿಸುತ್ತ ಸರ್ವರಿಗೂ ಕನ್ನಡ ರಾಜ್ಯೋತ್ಸವದ  ಹಾರ್ದಿಕ ಶುಭಾಶಯಗಳು . . . .   

ಭಾನುವಾರ, ಅಕ್ಟೋಬರ್ 30, 2011

ಹುಚ್ಚು ಮನಸ್ಸು

ಈ ಜೀವನವನ್ನೋದೇ ಹೀಗೆ . .  .
ಕಾಲ ಸಾಗುತ್ತಿರುತ್ತದೆ . . . .
ಆ ಕಾಲದ ಹಿಂದೆ ನಮ್ಮ ಮ್ಯಾರಥಾನ್ ಸಾಗುತ್ತಲೇ ಇರಬೇಕು. . .
ಸ್ವಲ್ಪ ಎಡವಿಬಿದ್ದು ಸುಧಾರಿಸಿಕೊಳ್ಳಲು ಕುಳಿತರೆ ನಮ್ಮನ್ನು ತುಳಿದುಕೊಂಡು ಮತ್ತೊಬ್ಬರು ಮುಂದುವರಿದಿರುತ್ತಾರೆ . . .
ಹೀಗೆ ಕಾಲದ ಹಿಂದೆ ಓಡುತ್ತ ಬಂದ ನಾನು ಹತ್ತು ವರುಷ ಮನೆಯಲ್ಲಿದ್ದು ನನ್ನ ಮುಂದಿನ ವಿದ್ಯಾಭ್ಯಾಸಕ್ಕೆ ಹಾಸ್ಟೆಲ್ ಸೇರುವ ಅವಕಾಶ ಒದಗಿ ಬಂತು . . . 
ನನ್ನ sslc ಪರೀಕ್ಷೆ ಮುಗಿಸಿ ಪಿಯುಸಿ ಮಾಡಲು ಹಾಸ್ಟೆಲ್ಗೆ ಸೇರಿದ ನಾನು ಮರೆಯಲಾಗದ ಕ್ಷಣಗಳನ್ನು ನನ್ನ ನೆನಪಿನ ಪುಟಗಳಿಗೆ ಈ ಹಾಸ್ಟೆಲಿನಲ್ಲಿ ಸೇರಿಸಿ ಕೊಂಡೆ . . . 
ಸಾದಾರಣವಾಗಿ ಎಲ್ಲ ಹಾಸ್ಟೆಲ್ಗಳಲ್ಲಿ ಇರುವಂತೆ ನೀತಿ ನಿಯಮಾವಳಿಗಳು ಇಲ್ಲಿ ಇರುತ್ತಿದ್ದರೆ ಈ ಹಾಸ್ಟೆಲ್ ಜೀವನ ಬೇಸತ್ತು ಹೋಗುತ್ತಿತ್ತೇನೋ, ಆದರೆ  ಈ ವಾರ್ಡನ್ ಇಲ್ಲದ ಹಾಸ್ಟೆಲ್ ಹಾರಲು ಬಿಟ್ಟ ಪಂಜರದ ಹಕ್ಕಿಯಂತೆ ಅನಿಸತೊಡಗಿತು. . . 
ಪ್ರಥಮವಾಗಿ ಬರ್ಜರಿ ಎಂಟು ಜನರ ರೂಮು ಸಿಕ್ಕಿದಾಗ ಆ ರೂಮೊಂದು ಮೋಜಿನ ತಾಣದಂತಿತ್ತು, ಪ್ರಥಮ ಕಿರು ಪರೀಕ್ಷೆಯ ಅಂಕ ನೋಡಿ ಆ ಮೋಜಿನ ತಾಣವನ್ನು ೨ ಜನರ ರೂಮಿಗೆ ಅನಿವಾರ್ಯವಾಗಿ ಬದಲಿಸಬೇಕಾಗಿ ಬಂದಿತು. . .
ಇಲ್ಲಿಗೆ ಸಾದಾರಣವಾಗಿ ನನ್ನ ಒಂಟಿತನ ಪ್ರಾರಂಭವಾಯಿತು . . .
ಹೆಚ್ಚಾಗಿ ಒಬ್ಬನೇ ರೂಮಿನಲ್ಲಿ ಇರುತ್ತಿದ್ದ ನಾನು ಈ ಒಂಟಿತನಕ್ಕೆ ಒಗ್ಗಿಕೊಳ್ಳುತ್ತ ಹೋದೆ. . .
ಕಾಲ ಕ್ರಮೇಣ ಅದನ್ನು ಇಷ್ಟಪಟ್ಟೆ . . . 
ಹೆಚ್ಚಾಗಿ ಮಾತನಾಡಲು ಇಷ್ಟಪಡದ ನನ್ನ ಗೆಳೆತನ ಪುಸ್ತಕದೊಂದಿಗೆ ಬೆಳೆಯಿತು . . .
ಆದರು ಒಮ್ಮೊಮ್ಮೆ ಈ ಹುಚ್ಚು ಮನಸ್ಸಿನ ಮಾಯೆಯಿಂದ ಯಾವಾಗಲೋ ಒಮ್ಮೆ ಸುತ್ತಾಡಲು ಗೆಳೆಯರೊಂದಿಗೆ ಹೊರ ಹೋಗುತ್ತಿದ್ದೆ . . .
ಆ ಎರಡುವರ್ಷ ಹೇಗೆ ಸಾಗಿತೋ ಗೊತ್ತಿಲ್ಲ !. . . 
ಕೋನೇ ಪರೀಕ್ಷೆ ಬಂದೇಬಿಟ್ಟಿತು . . . ನಂತರ CET ಪರೀಕ್ಷೆಯ ಸಿದ್ದತೆ ಈ ಹುಚ್ಚು ಮನಸ್ಸಿನಿಂದಾಗಿ  ಅಷ್ಟಕ್ಕಷ್ಟೇ. .  .
ಬೋರ್ಡ್ ಪರೀಕ್ಷೆಯಲ್ಲಿ ಏನೋ ಒಳ್ಳೆ ಅಂಕಬಂದರೂ ಈ ಹುಚ್ಚು ಮನಸ್ಸಿನ ದೆಸೆಯಿಂದ CET ರಾಂಕ್ ಅಷ್ಟೇನೂ ಚೆನ್ನಾಗಿ ಬರಲಿಲ್ಲ . . .
ಈ ರಾಂಕಿನ ದೆಸೆಯಿಂದ ನನಗೆ ಬೇಕಾದ ಕಾಲೇಜೂ ಸಿಗಲಿಲ್ಲ . . . .!
 ಕೊನೆಗೂ ನನಗೆ ಸಿಕ್ಕ ಕಾಲೇಜನ್ನು ಪಾಲಿಗೆ ಬಂದದ್ದೆ ಪಂಚಾಮೃತವೆಂದೆಸಿಕೊಳ್ಳುತ್ತಾ ತೃಪ್ತಿ ಪಟ್ಟೆ. . .
ಮತ್ತೆ ಈ ಎರಡನೇ ಹಂತದ ಹಾಸ್ಟೆಲ್ ಜೀವನ . . .
ಇಲ್ಲಿ ಮತ್ತದೇ ಒಂಟಿತನ . . .
ಆದರೆ ಇಲ್ಲಿ ಆ ಒಂಟಿತನವನ್ನು ಪ್ರೀತಿಸಲು ಶುರುಮಾಡಿದೆ . . .
ಈ sms ಚಾಟಿಂಗ್ ಇಷ್ಟವಿಲ್ಲದಿದ್ದರೂ ಮತ್ತದೇ ಹುಚ್ಚುಮನಸ್ಸಿನ ಮಾಯೆ . . .
ಹೀಗೇ ಸಾದಾರಣವಾಗಿ ಎರಡು ವರ್ಷ ಕಳೆದು ಹೋಗಿದೆ . . .
ನೋಡೋಣ !ಈ ಹುಚ್ಚು ಮನಸ್ಸು ಇನ್ನೇನು ಮಾಡುತ್ತದೆಂದು !!!

    

ಮಂಗಳವಾರ, ಜುಲೈ 26, 2011

ಭ್ರಷ್ಟರೇ ಸಾದ್ಯವಾದರೆ ನೀವೂ ಒಂದು ಬಾರಿ ನಮಿಸಿ . . .

ಇಂದು ಕಾರ್ಗಿಲ್ ಯುದ್ದದ ವಿಜಯೋತ್ಸವ ದಿನ,ತನ್ನ ತಾಯ್ನಾಡಿಗಾಗಿ ತಮ್ಮ ಪ್ರಾಣವನ್ನು ತೊರೆದ ಮಹಾನ್  ಹುತಾತ್ಮರ ದಿನ.
ಇಂದಿಗೆ ಶತ್ರು ದೇಶದ ವಿರುದ್ದ ವೀರೋಚಿತ ಜಯ ಪಡೆದು ಹನ್ನೆರಡು ವರ್ಷ. . . ಆದರೆ ಹುತಾತ್ಮರ ನೆನಪು ಮಾತ್ರ ಅಮರ . . .
ವಿಕ್ರಂ ಬಾತ್ರಾ,ಮನೋಜ್ ಕುಮಾರ್ ಪಾಂಡೆ,ಸಂಜೀವ್ ಕುಮಾರ್ ಮುಂತಾದ ಯೋಧರು  ಕೊರೆಯುವ ಚಳಿಯಲ್ಲೂ ತಮ್ಮ ಪ್ರಾಣವನ್ನು ತಾಯ್ನಾಡಿಗಾಗಿ ತಮ್ಮ ಗುಂಡಿಗೆಯನ್ನು ನೀಡಿದವರಿಗೊಂದು  ಸಲಾಂ. . . .
ತಮ್ಮ ಮನೆ,ಮಕ್ಕಳು,ಮಡದಿ,ಹೆತ್ತವರನ್ನೆಲ್ಲ ತೊರೆದು ತಾಯ್ನಾಡಿಗಾಗಿ ದೇಶ ಸೇವೆ ಮಾಡುವವರನ್ನು ಒಮ್ಮೆಯಾದರೂ  ನೆನೆಸಿಕೊಳ್ಳದಿದ್ದರೆ ಹೇಗೆ. . . . 
ಇಂತಹ ಹಿನ್ನೆಲೆಯುಳ್ಳ ಈ ನೆಲದಲ್ಲಿ  ಇಂದಿನ ಪರಿಸ್ಥಿತಿ ನಿಜಕ್ಕೂ ಶೋಚನೀಯ. . . .ನಮ್ಮ ದೇಶವನ್ನು ರಕ್ತ ಸಿಕ್ತ ಭೂಮಿಯಾಗಿ ಮಾಡಲು ಬಂದ ಉಗ್ರರಿಗೆ ಸಕಲ ಸವಲತ್ತುಗಳುಳ್ಳ ಜೈಲುಗಳಲ್ಲಿ ರಕ್ಷಣೆ ಈ ನಮ್ಮ ವೀರ ಯೋಧರೇ ನೀಡ ಬೇಕಾಗಿ ಬಂದಿದೆ . . . 
ಕಾರಣ ಈ ಹೊಲಸು ರಾಜಕಾರಣ,ರಾಜಕೀಯ ವ್ಯಕ್ತಿಗಳ ಹಣದಾಸೆ ವೋಟಿನಾಸೆ ಇತ್ಯಾದಿಗಳಿಂದ ನಮ್ಮ ದೇಶವನ್ನು ಹಾಳುಗೆಡವುತ್ತಿದ್ದರೂ ಕೈಕಟ್ಟಿ ನೋಡಿಕೊಂಡಿರಬೇಕಾದ ಹೀನ ಸ್ಥ್ಹಿತಿ ನಮಗೆ ಎದುರಾಗಿದೆ . .. .
ನಮ್ಮನ್ನು ರಕ್ಷಿಸುತ್ತಿರುವವರಿಗೆ ಸಹ  ರಕ್ಷಣೆ ಇಲ್ಲದಂತಾಗಿದೆ ,ದುಷ್ಟರಿಗೆ ನೀಡುವ ಸವಲತ್ತಿನ ಒಂದು ಭಾಗವೂ ಅವರಿಗೆ ಸಿಗುತ್ತಿಲ್ಲ,ಆದರೆ ಈ ಭ್ರಷ್ಟತೆಯ ಕಾರಣಕರ್ತರು ನಾವೇ . . . ಇಂತಹ ಸಂದರ್ಭದಲ್ಲಿ ಭ್ರಷ್ಟರೇ ನಿಮ್ಮ ಭ್ರಷ್ಟತೆಯ ನಡುವೆ ಸಮಯ ಮಾಡಿಕೊಂಡು ನೀವೂ ಒಂದು ಬಾರಿ ಹುತಾತ್ಮರಿಗೆ ನಮಿಸಿ ನಿಮ್ಮ ಪಾಪ ಸ್ವಲ್ಪವಾದರೂ ಕಳೆದುಕೊಳ್ಳಿ . ..  

ಬುಧವಾರ, ಜುಲೈ 6, 2011

ನನ್ ಬಗ್ಗೆ


ನನ್ ಹೆಸ್ರು ಹರಿಪ್ರಸಾದ್ . .. ಎಲ್ರು ಹರಿ ಅಂತ ಕರಿತಾರೆ . . .
ಊರು ಮೂಡಿಗೆರೆ . . ..
ಇನ್ನು ಓದುತ್ತಿರೋದು ಇಂಜಿನಿಯರಿಂಗ್ . . . .
ಸ್ವಲ್ಪ ಉದಾಸಿನ ಜಾಸ್ತಿ . . . .
ಚಾಟಿಂಗ್ ಗೇಮಿಂಗ್ನಲ್ಲಿ ಕಾಲಹರಣ . . . 
ಇನ್ನು ಸಮಯ ಸಿಕ್ಕರೆ ಪುಸ್ತಕ. . . 
ಆಗಾಗ twitter facebook . . .
ಇನ್ನು ಎಲ್ಲರೂ ಒಳ್ಳೆ ಹುಡುಗ ಅಂತಾರೆ ನನಗೇನು ಈ ಬಗ್ಗೆ ಅಷ್ಟಾಗಿ ಮಾಹಿತಿ ಇಲ್ಲ. . . .ಇದೆಲ್ಲ ನಿಮಗೆ ಬಿಟ್ಟದ್ದು . . . .ಹಾಗಂತ ಕೆಟ್ಟ ಅಬ್ಯಾಸ ಏನಿಲ್ಲ . . . ನನ್ನ ಲೆಕ್ಕದಲ್ಲಿ ಚಾಟಿಂಗ್ ಸದ್ಯಕ್ಕಿರುವ ಕಾಲಹರಣ ಮಾಡುತ್ತಿರುವ ದುಶ್ಚಟ. . . 
ಇನ್ನು ಈಗ ಬ್ಲಾಗಿಂಗ್ ಶುರುಮಾಡಿದ್ದೇನೆ. . .ನಾನು ಸಮಯ ಇದ್ದರೆ ಬರಿತೇನೆ..... ನೀವು ಸಮಯ ಇದ್ದರೆ ಓದಿ. . .  . :)