ನಮಸ್ಕಾರ ಸ್ಸಾ. . . .ರ್
ಡೊಳ್ಳು ಹೊಟ್ಟೆ, ಬೊಕ್ಕುತಲೆಯ ದಢೂತಿ ದೇಹದ ವ್ಯಕ್ತಿ ಬಂದಾಗ ಎಲ್ಲಾ ಮಕ್ಕಳು ಒಂದು ಬಾರಿ ನಿಶ್ಯಬ್ದರಾಗಿ ಹೇಳಿದ ಮಾತು!!!
ಆ ವ್ಯಕ್ತಿ ಬೇರಾರು ಅಲ್ಲ . . ಅವರೇ ನಮ್ಮ ಮಂಜಯ್ಯ ಮಾಸ್ತರರು. . .!!
ಮರವಂತಿಗೆ ಕುದುರೆಮುಖ ಅಭಯಾರಣ್ಯದ ನಡುವೆ ಇರುವ ಕುಗ್ರಾಮ. .
ನಡುವೆ ಕುದುರೆಮುಖದ ಪರ್ವತಗಳಿಲ್ಲದಿದ್ದರೆ ಈ ಗ್ರಾಮದಿಂದ ಕಳಸಕ್ಕೆ ಕೇವಲ ಎಂಟುಮೈಲಿ,ಆದರೆ ಈ ಪರ್ವತದಿಂದಾಗಿ ಬಸ್ಸು ಸುತ್ತು ಬಳಸಿ ಚಾರ್ಮಾಡಿ ಘಾಟಿಯಾಗಿ ಅರವತ್ತು ಮೈಲಿ ಕ್ರಮಿಸ ಬೇಕಾದ ಪರಿಸ್ಥಿತಿ. .
ಹಿಂದೆ ಗ್ರಾಮಸ್ಥರು ಮಣ್ಣಿನ ರಸ್ತೆಯನ್ನು ಮರವಂತಿಗೆಯಿಂದ ಕಳಸಕ್ಕೆ ಹೋಗಲು ಬಳಸುತ್ತಿದ್ದರೂ ಈಗ ನಕ್ಸಲರ ಹಾವಳಿಯಿಂದ ಈ ರಸ್ತೆಯನ್ನು ಸಂಪೂರ್ಣ ಮುಚ್ಚಲಾಗಿದೆ. . .
ಕಳ್ಳಸಾಗಾಣಿಕೆಗೂ ಈ ರಸ್ತೆ ಹೆಸರುವಾಸಿ . . .!
ಕುದುರೆಮುಖ ಅಭಯಾರಣ್ಯದ ನಡುವೆ ಇರುವ ಒಂದು ಹಿಂದುಳಿದ ಸ್ಥಳವೆಂದರೆ ಸಂಸೆ. . .
ಇಲ್ಲಿರುವುದು ಪ್ರಾಪಂಚಿಕ ಜ್ಞಾನದಿಂದ ಹೊರಗುಳಿದ ಬುಡಕಟ್ಟು ಜನಾಂಗ. .
ಇವರು ಏನೇ ಕೆಲಸವಿದ್ದರೂ ಬರಬೇಕಾದದ್ದು ಎಂಟು ಮೈಲಿ ಕಾಲ್ನಡಿಗೆಯಲ್ಲಿ ಕಳಸ ಇಲ್ಲವೇ ಮರವಂತಿಗೆಗೆ. .
ಇನ್ನು ಮಕ್ಕಳು ಹೆಚ್ಚಿನವರು ಶಾಲೆಯ ಮುಖ ನೋಡದಿದ್ದರೂ ಸರ್ಕಾರದ ಒತ್ತಾಯಕ್ಕೆ ಒಂದಿಬ್ಬರು ಮಣಿದು ಶಾಲೆಯ ಮತ್ತು ಶಿಕ್ಷಕರ ಯೋಗಕ್ಷೇಮವನ್ನು ವಿಚಾರಿಸಲು ಅಮವಾಸ್ಯೆಗೊಮ್ಮೆ ಹುಣ್ಣಿಮೆಗೊಮ್ಮೆ ಬರುತ್ತಿದ್ದರು!!
ಪಾಪ ಅವರಾದರೂ ಏನು ಮಾಡ್ಯಾರು ಎಂಟು ಮೈಲು ನಡೆಯ ಬೇಡವೇ???
ಇನ್ನೂ ಕೆಲವರ ಮನೆಯವರು "ವಾ ಮಗೆ ಬರ್ಪೆ ತೂಕ"(ಯಾರು ಬರುತ್ತಾರೆ ನೋಡುವ) ಎಂದು ಜಗಳಕ್ಕೆ ಸನ್ನದ್ಧರಾಗಿದ್ದರು. .
ಅವರ ಮಕ್ಕಳು ಶಾಲೆಗೆ ಹೋದರೆ,ಸೌದೆ ತರುವುದು,ಅವ್ರಿಗೆ ಕುಡಿಯಲು ತಂದು ಕೊಡುವುದ್ಯಾರು!!
ಇಲ್ಲಿಯೂ ಒಂದು ಸ್ವಾರ್ಥ್ಯ!!!
ಇವರು ಬರುತ್ತಿದ್ದ ಶಾಲೆಯ ಹಳ್ಳಿಯ ಮೇಷ್ಟ್ರೇ ಮಂಜಯ್ಯ ಮಾಸ್ತರರು. . .
ದಢೂತಿ ದೇಹವನ್ನು ಹೊತ್ತುಕೊಂಡು ೫೦ ವರ್ಷದ ಈ ಬ್ರಹ್ಮಚಾರಿ ಯುವಕ ಬರುತ್ತಿದ್ದದ್ದು ಎಂಟುಮೈಲಿ ದೂರದ ಕಳಸದಿಂದ!!
ಅದೂ ಕಲ್ನಡಿಗೆಯಲ್ಲಿ!!! ಅದೂ ಅಪರೂಪದಲ್ಲಿ!!
ಅಮವಾಸ್ಯೆ ಹುಣ್ಣಿಮೆಗೊಮ್ಮೆ ಬರುತ್ತಿದ್ದ ಮಕ್ಕಳು ಮತ್ತು ಮಾಸ್ತರರು ಒಂದೇ ದಿನ ಬಂದರೆಂದರೆ ಅದು ಬಹುದೊಡ್ಡ ಕಾಕತಾಳೀಯ. .
ಪಾಪ ಕೆಲ ಮಕ್ಕಳಿಗೆ ಅವರೇ ಮೇಸ್ಟ್ರೆಂದು ತಿಳಿದೇ ಇರಲಿಲ್ಲ. .
ನೋಡಿದರಲ್ವೇ ತಿಳಿಯುವುದು!!
ಅತ್ತ ಕರಾವಳಿಯೂ ಅಲ್ಲದ ಇತ್ತ ಮಲೆನಾಡೂ ಅಲ್ಲದ ಈ ಮರವಂತಿಗೆ ಪ್ರದೇಶದಲ್ಲಿ ಮಳೆಗಾಲದಲ್ಲಿ ಮಳೆ ಧಾರಾಕಾರವಾಗಿ ಸುರಿಯುತ್ತಿತ್ತು. .
ಈ ಮಳೆಗಾಲದಲ್ಲಿ ತಿಂಗಳುಗಳ ಕಾಲ ರಜೆ. . .
ಇನ್ನು ಮಳೆ ಪ್ರಾರಂಭ ಕಾಲದಲ್ಲಿ ಮತ್ತೆ ಒಂದು ತಿಂಗಳ ರಜೆ ಕಾರಣ ಗದ್ದೆ ನಾಟಿ!!
ಈ ಗದ್ದೆ ನಾಟಿಯಲ್ಲಿ ಶಿಕ್ಷಕರು ಮತ್ತು ಮಕ್ಕಳೂ ಬ್ಯುಸಿಯಾಗಿರುತ್ತಿದ್ದರು, , ,
ಈ ಕಾಲದಲ್ಲಿ ಶಾಲೆಗೆ ತಾತ್ಕಾಲಿಕ ಬೀಗ!!
ಮಳೆ ಬಿಟ್ಟ ಮೇಲೆ ಕುಯ್ಲಿಗಾಗಿ ಮತ್ತೆ ಒಂದು ತಿಂಗಳ ಚಕ್ಕರ್!!
ಶಾಲೆ ಇರುತ್ತಿದ್ದದ್ದು ಹೆಚ್ಚೆಂದರೆ ಒಂದು ತಿಂಗಳು. . !!
ಇನ್ನು ಈ ಸರ್ಕಾರ ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚಿದರೆ ಅವರು ಹೋಗಬೇಕಾದದ್ದು ದೂರದ ಬೆಳ್ತಂಗಡಿ ನಗರಕ್ಕೆ. . .
ಮರವಂತಿಗೆಗೇ ಬರಲು ಪರದಾಡುವ ಮಕ್ಕಳು ಬೆಳ್ತಂಗಡಿಗೆ ಬಂದಾರೇ????
ಇಷ್ಟು ಕಷ್ಟ ಪಟ್ಟು ಓದುವ ಛಲ ಹೊಂದಿರುವ ಮಕ್ಕಳು ಏನಾಗಬಲ್ಲರು???
ಗದ್ದೆ ನಾಟಿಯನ್ನೇ??? ಅಥವ ದೇಶದ ಈ ಪರಿಸ್ಥಿತಿಯನ್ನು ಬದಲಾಯಿಸುವ ವ್ಯಕ್ತಿಯೋ???!!!



















