ಭಾನುವಾರ, ಮಾರ್ಚ್ 22, 2015

ಚಿಲ್ರೆ ಪುರಾಣ


(ಇಲ್ಲಿ ಬಳಸಿರುವ ಚಿತ್ರಗಳು ಸಂದರ್ಭಿಕ! ಅಂತರ್ಜಾಲ ಕೃಪೆ)

ಚಿಲ್ರೆ ಇಲ್ವಾ ಬಾಸ್!!! ಇದು ದಿನನಿತ್ಯದ ಗೋಳು.
ಇನ್ನು ಬಸ್ ನಲ್ಲಂತೂ ಕೇಳಲೇ ಬೇಡಿ!! ನಿಮ್ಮ ಬಳಿ ಚಿಲ್ಲರೆ ಇಲ್ಲ ಅಂದ್ರೆ ಕಂಡಕ್ಟರ್ ಮಹಾಶಯ ನಿಮ್ಮನ್ನು ಮಹಾಪರಾಧಿಯಂತೆ ನೋಡುತ್ತಾನೆ.
ಇನ್ನು ಕೆಲವರು ಟಿಕೆಟ್ ನ ಹಿಂದೆ ಏನೋ ಗೀಚಿ ತಮಗೆ ಸಂಬಧವೇ ಇಲ್ಲದಂತೆ ಹೊರಟು ಹೋಗಿಬಿಡುತ್ತಾರೆ!
ಇನ್ನು ಚಿಲ್ಲರೆ ಕೇಳಲು ಹೋದಿರೆಂದುಕೊಳ್ಳಿ. ಏನ್ ಸ್ಸಾ....ರ್ ನಿಮ್ ೫ ರುಪಾಯಿ ಹಿಡ್ಕೊಂಡು ಓಡೊಗ್ತೀವಾ! ಮನೆ ಕಟ್ಟಕ್ಕಾಗುತ್ತಾ ನಿಮ್ ಎರಡ್ ರುಪಾಯಿನಲ್ಲಿ! ಎಂದು ಪ್ರವಚನ ಶುರುಮಾಡ್ತಾನೆ ನಮ್ ಬಸ್ಸ್ ಗುರು!!!
So in general. "ಚಿಲ್ಲರೆ ಇಲ್ಲದ ಪ್ರಯಾಣ ನಶ್ಟಕ್ಕೆ ಆಹ್ವಾನ"!!

coming to the hotel boss!!
ನಿಮ್ಮ ಬಳಿ ಚಿಲ್ರೆ ಇಲ್ಲಾ ಅಂದ್ಕೊಳ್ಳಿ ನಿಮ್ಮ ಹೊಟ್ಟೆಗೆ ತಣ್ಣೀರ್ ಬಟ್ಟೆ!!!
೫೦೦ ತೆಗೆದು ನೀವೇನಾದರೂ ಒಂದ್ ಪ್ಲೇಟ್ ಇಡ್ಲಿ ಕೊಡಪ್ಪಾ ಅಂತ ಕೇಳಿದ್ರಾ ಅಂತಿಟ್ಕೊಳ್ಳಿ. . ಚಿಲ್ರೆ ಇಲ್ಲಾ ಸಾರ್. ಅಸ್ಟೇ ಅವನ ಉತ್ತರ!
ಮುಂದೆ ಏನಾದ್ರು ಮಾತಾಡಿದ್ರಿ ಅಂದ್ಕೊಳ್ಳಿ! ಏನ್ ಸಾರ್ , ಎಲ್ರಿಗೂ ಎಲ್ಲಿಂದ ತರಣ ಚಿಲ್ರೆ ಅಂತ ತನ್ನ ಗೋಳನ್ನ ಹೇಳಿ ಕೊಳ್ತಾನೆ.
one more catagory!!
೩೬, ೩೭ ಈ ತರ ಬಿಲ್ಲ್ ಆಯ್ತು ಅಂದ್ಕೋಳ್ಳಿ ನಿಮಿಗೆ ಹೇಳೋವಾಗ ೪೦ ಹೇಳ್ ಬಿಡ್ತಾನೆ!! ಫ಼ೈಟೂ ಇಲ್ಲಾ , ಚಿಲ್ರೆನೂ ಇಲ್ಲ!!

ಇವರ ನಡುವೆ ನಾವೇ ಕೊನೆಗೆ ಚಿಲ್ರೆ ಜನಗಳಾಗೋಗ್ಬಿಡ್ತೀವಿ ಅಲ್ವಾ!!   

ಬುಧವಾರ, ಜನವರಿ 25, 2012

ಇಂದೇಕೆ ಹೀಗೆ??

ಚಿತ್ರ ಕೃಪೆ:ನೆಟ್-ಲೋಕ

ಇಂದೇಕೋ ಎಂದಿನಂತಿಲ್ಲವಲ್ಲ ನಾನು?!
ಅದೇಕೆ ಹೀಗೆನಿಸುತ್ತಿದೆ ನನಗೆ???
ಪ್ರಶಾಂತವಾಗಿದ್ದ ಮನಸ್ಸು ಪ್ರಕ್ಷುಬ್ಧವಾದಂತೆ. . 
ಯಾರೋಬಂದು ನನ್ನನ್ನು ಅಣಕ ಮಾಡಿದಂತೆ. . 
ನನಗೆ ಹತ್ತಿರದವರೆಲ್ಲ ದೂರ ದೂರ ಹೋದಂತೆ. . 
ನಾನು ಮಾಡಿದ್ದೆಲ್ಲವೂ ಸರಿಯಲ್ಲದಂತೆ ಅನ್ನಿಸುತ್ತಿದೆಯಲ್ಲಾ. . !!!
ದಿನವೂ ಕಿಟಕಿಯಲ್ಲಿ ಕುಳಿತು ನಗುತ್ತಿದ್ದ ಪಾರಿವಾಳ ಇಂದು ಮುನಿಸಿಕೊಂಡಿತೇನೋ!!
ನನ್ನನ್ನೂ ದಿನವೂ ನಗಿಸುತ್ತಿದ್ದ ಕಪಿಗಳು ಇಂದೆಲ್ಲಿ ಹೋದವು??? ಅವಕ್ಕೂ ಬೇಡವಾಯಿತೆ ನನ್ನ ನಗು!
ದಿನವೂ ಬೀಸುತ್ತಿದ್ದ ತಂಗಾಳಿ ಇಂದು ಬಿಸಿಗಾಳಿಯಾಗಿ ಪರಿವರ್ತನೆಗೊಂಡಿತೋ??
ದಿನವೂ ಹೇಳಿದಂತೆ ಕೇಳುತ್ತಿದ್ದ ಲೇಖನಿ ಇಂದೇಕೆ ಒಂದೇ ಬಾರಿಗೆ ಸ್ಥಬ್ದವಾಗಿ ಹೋಯಿತು??
ಪುಸ್ತಕದಲ್ಲಿದ್ದ ಅಕ್ಷರಗಳು ಇಂದೇಕೆ ಕಣ್ಣಾಮುಚ್ಚೆಯಾಡುತ್ತಿದೆ??
ನಾನು ದಿನವೂ ಕೇಳುತ್ತಿದ್ದ ಇಂಪಾದಹಾಡು ಇಂದೇಕೆ ಕರ್ಣ ಕಠೋರವಾಗಿ ಹೋಗಿದೆ??
ನೀಲಾಕಾಶ ಕಪ್ಪುಗಟ್ಟಿ ಬಿಟ್ಟೀತಲ್ಲಾ! ಇಷ್ಟು ಬೇಗ ಕತ್ತಲಾಯಿತೇ?
ಅವರೇಕೆ ನನ್ನನ್ನೇನೋಡುತ್ತಿದ್ದರೆ?? ನಾನೇನಾದರೂ ತಪ್ಪು ಮಾಡಿದೆನೇ??
ದಿನವೂ ನಾನು ನೋಡುತ್ತಿದ್ದ ಮರ ಇಂದೇಕೆ ಒಣಗಿ ಹೋಯಿತು??
ಬಯಲಲ್ಲಿ ದಿನವೂ ಆಡುತ್ತಿದ್ದ ಮಕ್ಕಳು ಇಂದೇಕೆ ಬರದೇ ಹೋದರು!
ಕಣ್ಣುಮುಚ್ಚಿದಾಕ್ಷಣ ಆವರಿಸುತ್ತಿದ್ದ ನಿದ್ರಾದೇವಿಗೆ ಕೂಡ ನನ್ನಮೇಲೆ ಮುನಿಸೇ?
ಅದೇಕೆ ಇಂದು ಊಟದಲ್ಲಿ ಕಲ್ಲು ಸಿಕ್ಕಿತು?
ನನ್ನ ಗಡಿಯಾರದ ಮುಳ್ಳುಗಳೆಲ್ಲಾ ಹಿಮ್ಮುಖವಾಗಿ ಚಲಿಸುತ್ತಿರುವಂತೆ ಭಾಸವಾಗುತ್ತಿದೆಯಲ್ಲಾ!
ಎಂದೋ ಕಾಡಿ ಮರೆಯಾಗಿದ್ದ ಒಂಟಿತನ ಈಗೇಕೆ ಮತ್ತೆ ಬಂದು ಕಾಡುತ್ತಿದೆ?
ದಿನವೂ ಆಶೀರ್ವದಿಸುತ್ತಿದ್ದ ಗಣೇಶ ಇಂದೇಕೆ ನನ್ನ ಮೊರೆಯನ್ನಾಲಿಸುತ್ತಿಲ್ಲ??
ಅಯ್ಯೋ ಏನಾಯಿತು ನನಗೆ??
ಇದೇನು ಸನ್ಯಾಸತ್ವವೇ???
ಅರ್ಜುನನಂತೆ ಸನ್ಯಾಸತ್ವದ ಮುಖವಾಡವೇ??
ಇಂದೇಕೆ ಹೀಗೆ??
  

ಮಂಗಳವಾರ, ಜನವರಿ 3, 2012

"ನಿಮ್ಮ ಬಗ್ಗೆ ಯಾವುದೇ ಟೀಕೆಗಳಿಲ್ಲದಿದ್ದರೆ ನೀವು ಸರಿದಾರಿಯಲ್ಲಿ ಸಾಗುತ್ತಿಲ್ಲವೆಂದರ್ಥ"


ಛಾಯೆ:ಹರಿಪ್ರಸಾದ್

"ನಿಮ್ಮ ಬಗ್ಗೆ ಯಾವುದೇ ಟೀಕೆಗಳಿಲ್ಲದಿದ್ದರೆ ನೀವು ಸರಿದಾರಿಯಲ್ಲಿ ಸಾಗುತ್ತಿಲ್ಲವೆಂದರ್ಥ"
ಈ ಮಾತನ್ನು ಹೇಳಿದವರು ಸ್ವಾಮಿ ವಿವೇಕಾನಂದರು.ಅವರು ಹೇಳಿದ ಮಾತು ನೂರಕ್ಕೆ ನೂರು ಸತ್ಯ ಎಂದು ನನಗೆ ಹಲವು ಬಾರಿ ಅನಿಸಿದ್ದುಂಟು.
ಹಲವು ಬಾರಿ ಟೀಕೆಗಳನ್ನನುಭವಿಸಿದಾಗ ದುಃಖವಾಗುವುದು ಅಥವಾ ಮನಸ್ಸಿಗೆ ನೋವಾಗುವುದು ಒಬ್ಬ ಮನುಷ್ಯನ ಸಹಜ ಗುಣ.
ಒಬ್ಬ ಸರಿದಾರಿಯಲ್ಲಿ ಸಾಗುತ್ತಿಲ್ಲದಿದ್ದರೆ ಅವನ ತಪ್ಪುಗಳನ್ನು ತಿದ್ದುವುದು ಅಥವಾ ಸರಿಪಡಿಸುವುದು ಸುಲಭವಲ್ಲದ್ದರಿಂದ ಹಾಗು ನಾವು ತಪ್ಪುದಾರಿಯನ್ನು ತುಳಿಯುವುದನ್ನು ಕಂಡು ಖುಷಿ ಪಟ್ಟು ಟೀಕೆ ಮಾಡದವರೇ ಹೆಚ್ಚು. 
ಇನ್ನು ನೀವು ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದರೆ ಸಾಕು ನಿಮ್ಮ ಬಗೆಗಿನ ಟೀಕೆಗಳ ಪಟ್ಟಿಯೇ ಬೆಳೆಯುತ್ತದೆ.
ಇನ್ನು ನನ್ನ ಅನುಭವವನ್ನು ಹೇಳಬೇಕಾದರೆ ನಾನು ಅನುಭವಿಸಿದ ಟೀಕೆಗಳಿಗೆ ಲೆಕ್ಕವಿಲ್ಲ.
ನನ್ನ ಬಗೆಗಿನ ಟೀಕೆಗಳನ್ನೆಲ್ಲಾ ನಾನು ತಲೆಗೆ ಹಚ್ಚಿಕೊಂಡಿದ್ದರೆ ನಾನು ಹುಚ್ಚನಾಗಿ ಬಿಡುತ್ತಿದ್ದೆನೊ ಏನೋ!
ನಾನು ಯಾವುದೇ ಛಾಯಾಚಿತ್ರವನ್ನು ತೆಗೆದಾಗ,ಯಾವುದೇ ಲೇಖನಗಳನ್ನು ಬರೆದಾಗ,ತರಗತಿಯಲ್ಲಿ ಯಾವುದೇ ಉತ್ತರ ನೀಡಿದಾಗ ಇನ್ನೂ ಅನೇಕ ಸಂದರ್ಭದಲ್ಲಿ ಅನೇಕ ಟೀಕೆಗಳನ್ನನುಭವಿಸಿದವನು ನಾನು!
ಆದರೆ ಇಂದಿನವರಗೆ ಅದು ನನ್ನ ಹಿತೈಷಿಗಳು ನೀಡಿದ ಕಿವಿಮಾತೆಂದು ತಿಳಿದಿದ್ದೇನೆ.
ನಿಮಗೆ ಟೇಕೆಗಳೇ ಇಲ್ಲದಿದ್ದರೆ ನಿಮ್ಮ ತಪ್ಪಿನ ಅರಿವಾಗುವುದೆಂತು!
ಎಲ್ಲರೂ ನಿಮ್ಮನ್ನು ಹೊಗಳುತ್ತಿದ್ದರೆ ನಿಮಗೆರಡು ಕೊಂಬುಬಂದು ತಪ್ಪು ದಾರಿ ಹಿಡಿಯಲೆತ್ನಿಸುತ್ತೀರಿ!,ಹಾಗಾಗಿ ನೀವು ಟೀಕಾಕಾರರಿಗೊಂದು thanks ಹೇಳಬೇಕು,ಅವರೇ ಅಲ್ಲವೇ ನಿಮ್ಮ ತಪ್ಪುಗಳನ್ನು ತಿದ್ದಿ ಸರಿದಾರಿಯಲ್ಲಿ ಹೋಗಲು ಸಹಕರಿಸುತ್ತಿರುವುದು.
ಈ ಟೀಕೆಗಳಿದೆಯಲ್ಲಾ ಅವು ನಮ್ಮ ಬಂಧು ಮಿತ್ರರಲ್ಲೇ ಹೆಚ್ಚು!
ಯಾವುದೇ ಒಂದು ಮದುವೆ ಸಮಾರಂಭದಲ್ಲಾಗಿರಬಹುದು ಅಥವಾ ಇನ್ಯಾವುದೋ ಇತರ ಕಾರ್ಯಕ್ರಮದಲ್ಲಾಗಿರಬಹುದು,ಸಂಘಟಕರು ಕಾರ್ಯಕ್ರಮವನ್ನು ಎಷ್ಟೇ ಚಂದಗಾಣಿಸಲು ಪ್ರಯತ್ನ ಪಟ್ಟರೂ ಈ ಟೀಕಾಕಾರರೇ ಅಲ್ಲಿ ಮೇಲುಗೈ ಸಾದಿಸಿಬಿಡುತ್ತಾರೆ ನೋಡಿ!!!
ಅಡುಗೆ ಏನೂ ಸರಿಯಾಗಿರಲಿಲ್ಲ,ಮದುವೆ ಗಂಡು ಸ್ವಲ್ಪಕಪ್ಪು,"ಮದುವೆ ಮನೆಯವರಿಗೆ ಸ್ವಲ್ಪವೂ ಸತ್ಕಾರಮಾಡುವ ಸ್ವಭಾವವಿಲ್ಲ. . .ನನ್ನಬಳಿ ಮತನಾಡಲೇ ಇಲ್ಲವಲ್ಲ",ಹೀಗೆ ಟೀಕೆಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಇನ್ನು ನೆರೆಕರೆ ಮನೆಯವರಲ್ಲಿ ಈ ಟೀಕೆಗಳು ಇನ್ನೂ ತಮಾಷೆಯಾಗಿರುತ್ತದೆ,ಕೆಳಗಿನ ಮನೆಯಲ್ಲಿ ಪಾತ್ರೆಯ ಶಬ್ದವಾದರೆ ಅದು ನಮ್ಮ ಮೇಲಿನ ಸಿಟ್ಟಿನಿಂದ ಮಾಡಿದ ಸದ್ದು,ಇನ್ನು ನೀರು ಬರುವುದು ನಿಂತರೆ ಅದು ಪಕ್ಕದ ಮನೆಯವರು ನಿಲ್ಲಿಸಿದ್ದು,ಇತ್ಯಾದಿ ಅರ್ಥಹೀನ ಟೀಕೆಗಳು!!
ಈ ಟೀಕಾಪ್ರಹಾರ ಎನ್ನುವುದು ಈ ಮನೆಯಲ್ಲಿ ಸುಮ್ಮನೆ ಕುಳಿತಿರುವ ಹೆಂಗಸರಿಗೆ ಒಂದು ರೀತಿಯ time pass ಉದ್ಯೋಗ (ಎಲ್ಲರಿಗೂ ಈ ಮಾತು ಅನ್ವಯಿಸುವುದಿಲ್ಲ ;) ).
ವಿದ್ಯಾರ್ಥಿಗಳಾದ ನಾವಂತೂ ಶಿಕ್ಷಕರನ್ನು ಟೀಕೆ ಮಾಡುವುದರಲ್ಲಿ ಎತ್ತಿದ ಕೈ,ಸರಿಯಾಗಿ ಓದದ ನಾವು ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಾಗ ದೂರುವುದು ಶಿಕ್ಷಕರನ್ನು!!!
ಇನ್ನು ಯಾವುದೇ ಒಂದು ಸಂಗೀತ ಕಾರ್ಯಕ್ರಮದಲ್ಲಿ ನೀವು ಕುಳಿತರೆ ಸಂಗೀತದ ಗಂಧಗಾಳಿಯೂ ಇಲ್ಲದ ಅಯೋಗ್ಯರು ಮಾಡುವ ಸ್ವರ,ಸ್ಥಾಯಿ,ರಾಗದ ಬಗೆಗಿನ ಟೀಕೆಗಳು ಹಾಸ್ಯಾಸ್ಪದ.
ಇನ್ನು ರಾಜಕಾರಣಿಗಳ ಟೀಕೆಯನ್ನು ನೋಡಬೇಕು ತನ್ನ ಪಕ್ಷ ಭ್ರಶ್ಟತೆಯಲ್ಲಿ ಮುಳುಗಿದ್ದರೂ ಇನ್ನೊಬ್ಬನ ಬಗ್ಗೆ ಟೀಕೆಮಾಡುವವರಿಗೆಷ್ಟು ನೈತಿಕತೆಯಿದೆ???
"ಎಲ್ಲರ ಮನೆಯ ದೋಸೆ ತೂತಾದರೆ ತನ್ನ ಮನೆಯ ಕಾವಲಿಯೇ ತೂತೆಂಬುದನ್ನು ಅರಿಯಲಾರರು"ಎಂಬ ಉಕ್ತಿಯಂತಾಯಿತಲ್ಲವೇ ಈ ಮೇಲಿನವರ ಪರಿಸ್ಥಿತಿ.
ಇನ್ನು jobs,ಅಬ್ದುಲ್ ಕಲಾಂ,ಎಡಿಸನ್ ಅಷ್ಟೇ ಏಕೆ ನಮ್ಮ ಸ್ವಾಮಿ ವಿವೇಕಾನಂದರು ಟೀಕೆಯ ಬಾಣಗಳನ್ನೇ ಹೂವಿನ ಬಾಣಗಳಾಗಿಸಿ ಸಾಧಿಸಿದ ಮಹನೀಯರು.
ಇನ್ನು ಆ ಭಾಗವಂತನೇ ಹಲವು ಟೀಕೆಗಳನ್ನನುಭವಿಸುವಾಗ ಹುಲು ಮಾನವರಾದ ನಾವ್ಯಾವ ಲೆಕ್ಕ??!!!
ನಮ್ಮ ಮೇಲಿನ ಟೀಕೆಗಳಿಗೆ ಪ್ರತಿಯಾಗಿ ಮರು ಟೀಕೆಮಾಡದೆ ಅದನ್ನೇ ನಮಗೆ ನೀಡಿದ ಸಲಹೆಯೆಂದು ಬಾವಿಸಿ ಟೀಕಾಕಾರರೆದುರು ಓರ್ವ ಯಶಸ್ವಿ ವ್ಯಕ್ತಿಯಾಗಿ ಸಾಧಿಸಿ ತೋರಿಸುವುದು ಸೂಕ್ತವಲ್ಲವೇ?????

ಶುಕ್ರವಾರ, ಡಿಸೆಂಬರ್ 23, 2011

ಹಳ್ಳಿ ಶಾಲೆ ಮತ್ತು ಮಂಜಯ್ಯ ಮಾಸ್ತರರು



ನಮಸ್ಕಾರ ಸ್ಸಾ. . . .ರ್
ಡೊಳ್ಳು ಹೊಟ್ಟೆ, ಬೊಕ್ಕುತಲೆಯ ದಢೂತಿ ದೇಹದ ವ್ಯಕ್ತಿ ಬಂದಾಗ ಎಲ್ಲಾ ಮಕ್ಕಳು ಒಂದು ಬಾರಿ ನಿಶ್ಯಬ್ದರಾಗಿ ಹೇಳಿದ ಮಾತು!!!
ಆ ವ್ಯಕ್ತಿ ಬೇರಾರು ಅಲ್ಲ . . ಅವರೇ ನಮ್ಮ ಮಂಜಯ್ಯ ಮಾಸ್ತರರು. . .!! 

ಮರವಂತಿಗೆ ಕುದುರೆಮುಖ ಅಭಯಾರಣ್ಯದ ನಡುವೆ ಇರುವ ಕುಗ್ರಾಮ. . 
ನಡುವೆ ಕುದುರೆಮುಖದ ಪರ್ವತಗಳಿಲ್ಲದಿದ್ದರೆ ಈ ಗ್ರಾಮದಿಂದ ಕಳಸಕ್ಕೆ ಕೇವಲ ಎಂಟುಮೈಲಿ,ಆದರೆ ಈ ಪರ್ವತದಿಂದಾಗಿ ಬಸ್ಸು ಸುತ್ತು ಬಳಸಿ ಚಾರ್ಮಾಡಿ ಘಾಟಿಯಾಗಿ ಅರವತ್ತು ಮೈಲಿ ಕ್ರಮಿಸ ಬೇಕಾದ ಪರಿಸ್ಥಿತಿ. . 
ಹಿಂದೆ ಗ್ರಾಮಸ್ಥರು ಮಣ್ಣಿನ ರಸ್ತೆಯನ್ನು ಮರವಂತಿಗೆಯಿಂದ ಕಳಸಕ್ಕೆ ಹೋಗಲು ಬಳಸುತ್ತಿದ್ದರೂ ಈಗ ನಕ್ಸಲರ ಹಾವಳಿಯಿಂದ ಈ ರಸ್ತೆಯನ್ನು ಸಂಪೂರ್ಣ ಮುಚ್ಚಲಾಗಿದೆ. . .
ಕಳ್ಳಸಾಗಾಣಿಕೆಗೂ ಈ ರಸ್ತೆ ಹೆಸರುವಾಸಿ . . .!
ಕುದುರೆಮುಖ ಅಭಯಾರಣ್ಯದ ನಡುವೆ ಇರುವ ಒಂದು ಹಿಂದುಳಿದ ಸ್ಥಳವೆಂದರೆ ಸಂಸೆ. . . 
ಇಲ್ಲಿರುವುದು ಪ್ರಾಪಂಚಿಕ ಜ್ಞಾನದಿಂದ ಹೊರಗುಳಿದ ಬುಡಕಟ್ಟು ಜನಾಂಗ. . 
ಇವರು ಏನೇ ಕೆಲಸವಿದ್ದರೂ ಬರಬೇಕಾದದ್ದು ಎಂಟು ಮೈಲಿ ಕಾಲ್ನಡಿಗೆಯಲ್ಲಿ ಕಳಸ ಇಲ್ಲವೇ ಮರವಂತಿಗೆಗೆ. . 
ಇನ್ನು ಮಕ್ಕಳು ಹೆಚ್ಚಿನವರು ಶಾಲೆಯ ಮುಖ ನೋಡದಿದ್ದರೂ ಸರ್ಕಾರದ ಒತ್ತಾಯಕ್ಕೆ ಒಂದಿಬ್ಬರು ಮಣಿದು ಶಾಲೆಯ ಮತ್ತು ಶಿಕ್ಷಕರ ಯೋಗಕ್ಷೇಮವನ್ನು ವಿಚಾರಿಸಲು ಅಮವಾಸ್ಯೆಗೊಮ್ಮೆ ಹುಣ್ಣಿಮೆಗೊಮ್ಮೆ ಬರುತ್ತಿದ್ದರು!!
ಪಾಪ ಅವರಾದರೂ ಏನು ಮಾಡ್ಯಾರು ಎಂಟು ಮೈಲು ನಡೆಯ ಬೇಡವೇ???
ಇನ್ನೂ ಕೆಲವರ ಮನೆಯವರು  "ವಾ ಮಗೆ ಬರ್ಪೆ ತೂಕ"(ಯಾರು ಬರುತ್ತಾರೆ ನೋಡುವ) ಎಂದು ಜಗಳಕ್ಕೆ ಸನ್ನದ್ಧರಾಗಿದ್ದರು. . 
ಅವರ ಮಕ್ಕಳು ಶಾಲೆಗೆ ಹೋದರೆ,ಸೌದೆ ತರುವುದು,ಅವ್ರಿಗೆ ಕುಡಿಯಲು ತಂದು ಕೊಡುವುದ್ಯಾರು!!
ಇಲ್ಲಿಯೂ ಒಂದು ಸ್ವಾರ್ಥ್ಯ!!!
ಇವರು ಬರುತ್ತಿದ್ದ ಶಾಲೆಯ ಹಳ್ಳಿಯ ಮೇಷ್ಟ್ರೇ ಮಂಜಯ್ಯ ಮಾಸ್ತರರು. . .
ದಢೂತಿ ದೇಹವನ್ನು ಹೊತ್ತುಕೊಂಡು ೫೦ ವರ್ಷದ ಈ ಬ್ರಹ್ಮಚಾರಿ ಯುವಕ ಬರುತ್ತಿದ್ದದ್ದು ಎಂಟುಮೈಲಿ ದೂರದ ಕಳಸದಿಂದ!!
ಅದೂ ಕಲ್ನಡಿಗೆಯಲ್ಲಿ!!! ಅದೂ ಅಪರೂಪದಲ್ಲಿ!!
ಅಮವಾಸ್ಯೆ ಹುಣ್ಣಿಮೆಗೊಮ್ಮೆ ಬರುತ್ತಿದ್ದ ಮಕ್ಕಳು ಮತ್ತು ಮಾಸ್ತರರು ಒಂದೇ ದಿನ ಬಂದರೆಂದರೆ ಅದು ಬಹುದೊಡ್ಡ ಕಾಕತಾಳೀಯ.  .
ಪಾಪ ಕೆಲ ಮಕ್ಕಳಿಗೆ ಅವರೇ ಮೇಸ್ಟ್ರೆಂದು ತಿಳಿದೇ ಇರಲಿಲ್ಲ. . 
ನೋಡಿದರಲ್ವೇ ತಿಳಿಯುವುದು!!
ಅತ್ತ ಕರಾವಳಿಯೂ ಅಲ್ಲದ ಇತ್ತ ಮಲೆನಾಡೂ ಅಲ್ಲದ ಈ ಮರವಂತಿಗೆ ಪ್ರದೇಶದಲ್ಲಿ ಮಳೆಗಾಲದಲ್ಲಿ ಮಳೆ ಧಾರಾಕಾರವಾಗಿ ಸುರಿಯುತ್ತಿತ್ತು.  .
ಈ ಮಳೆಗಾಲದಲ್ಲಿ ತಿಂಗಳುಗಳ ಕಾಲ ರಜೆ. . .
ಇನ್ನು ಮಳೆ ಪ್ರಾರಂಭ ಕಾಲದಲ್ಲಿ ಮತ್ತೆ ಒಂದು ತಿಂಗಳ ರಜೆ ಕಾರಣ ಗದ್ದೆ ನಾಟಿ!!
ಈ ಗದ್ದೆ ನಾಟಿಯಲ್ಲಿ ಶಿಕ್ಷಕರು ಮತ್ತು ಮಕ್ಕಳೂ ಬ್ಯುಸಿಯಾಗಿರುತ್ತಿದ್ದರು, , ,
ಈ ಕಾಲದಲ್ಲಿ ಶಾಲೆಗೆ ತಾತ್ಕಾಲಿಕ ಬೀಗ!!
ಮಳೆ ಬಿಟ್ಟ ಮೇಲೆ ಕುಯ್ಲಿಗಾಗಿ ಮತ್ತೆ ಒಂದು ತಿಂಗಳ ಚಕ್ಕರ್!!
ಶಾಲೆ ಇರುತ್ತಿದ್ದದ್ದು ಹೆಚ್ಚೆಂದರೆ ಒಂದು ತಿಂಗಳು. . !!
ಇನ್ನು ಈ ಸರ್ಕಾರ ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚಿದರೆ ಅವರು ಹೋಗಬೇಕಾದದ್ದು ದೂರದ ಬೆಳ್ತಂಗಡಿ ನಗರಕ್ಕೆ. . .
ಮರವಂತಿಗೆಗೇ ಬರಲು ಪರದಾಡುವ ಮಕ್ಕಳು ಬೆಳ್ತಂಗಡಿಗೆ ಬಂದಾರೇ????
ಇಷ್ಟು ಕಷ್ಟ ಪಟ್ಟು ಓದುವ ಛಲ ಹೊಂದಿರುವ ಮಕ್ಕಳು ಏನಾಗಬಲ್ಲರು???
ಗದ್ದೆ ನಾಟಿಯನ್ನೇ??? ಅಥವ ದೇಶದ ಈ ಪರಿಸ್ಥಿತಿಯನ್ನು ಬದಲಾಯಿಸುವ  ವ್ಯಕ್ತಿಯೋ???!!!

ಸೋಮವಾರ, ಡಿಸೆಂಬರ್ 19, 2011

ಅಲೆತ


ಹಾಸ್ಟೆಲ್ನಲ್ಲಿ ರೂಮಿನಲ್ಲೇ ಕಾಲ ಕಳೆಯುವ ನಾನು ಮನೆಗೆ ಬಂದಾಕ್ಷಣ ನನ್ನ ಅಲೆತ ಪ್ರಾರಂಭವಾಗಿ ಬಿಡುತ್ತದೆ. . 
ಪಶ್ಚಿಮಘಟ್ಟದ ತಪ್ಪಲಲ್ಲಿರುವ ಮೂಡಿಗೆರೆಯಲ್ಲಿ ಅಲೆಯಲು ಸ್ಥಳಗಳ ಕೊರತೆಯೇನಿಲ್ಲ. . .
ಸುತ್ತಮುತ್ತ ಹಳ್ಳಿಗಳಿರುವ ಈ ಮೂಡಿಗೆರೆಯಲ್ಲಿ ಕಾಫಿತೋಟ. . ಕೆಳಗೂರಿನ ಚಹ ತೋಟ. . .
ಚಾರ್ಮಾಡಿ ಘಾಟಿ ಇತ್ಯಾದಿಗಳನ್ನು ಗೆಳೆಯ ರಾಘವೇಂದ್ರನೊಂದಿಗೆ ಸುತ್ತುವ ಮಜವೇ ಬೇರೆ. . .
ಈ ಮಲೆನಾಡಿನಲ್ಲಿ ಮಳೆಗಾಲದಲ್ಲಿ ರಚ್ಚೆ ಹಿಡಿದು ಸುರಿಯುವ ಮಳೆಯನ್ನು ನೋಡುವಾಗ ನಮ್ಮ ಕಾಯ್ಕಿಣಿಯವರ ಮಳೆಯಸಾಲುಗಳು ನೆನಪಾಗುತ್ತದೆ. . 
ಕುವೆಂಪುರವರ ಪ್ರಾಕೄತಿಕ ವರ್ಣನೆಗಳನ್ನು ಅನುಭವಿಸಬೇಕಾದರೆ ನೀವು ಮಲೆನಾಡಿಗೆ ಬರಬೇಕು ಸ್ವಾಮಿ!!
ಅದಕ್ಕೇ ಇರಬೇಕು ತೇಜಸ್ವಿಯವರು ಮೂಡಿಗೆರೆಯನ್ನು ಆರಿಸಿಕೊಂಡದ್ದು. . .
ಇನ್ನು ಚಳಿಗಾಲದ ಅನುಭವವನ್ನು ನೀವೇ ಬಂದು ಅನುಭವಿಸಬೇಕು. . .!
ಇನ್ನು ಈ ನನ್ನ ಅಲೆತದಲ್ಲಿ ನನ್ನ ಸೈಕಲ್‍ನ ಪಾತ್ರವನ್ನು ಹೇಳದೇ ಇದ್ದರೆ ಅದು ಪಾಪ ಮುನಿಸಿಕೊಂಡಿತೋ ಏನೋ!!
ಯಾವುದೇ ಗದ್ದೆ ಗುಡ್ಡಗಳನ್ನು ಏರುವಲ್ಲಿ ನಮ್ಮ ಜೊತೆಗೂಡುವ ಸೈಕಲ್‍ನ ಸ್ಥಾನವನ್ನು ಬೈಕ್ ನಿಭಾಯಿಸಲು ಸಮರ್ಥವಾಗಿದೆಯೇ??
ನಮ್ಮ ಅನುಭವದ ಕೆಲವು ತುಣುಕುಗಳನ್ನು ಕೆಳಗೆ ನೀಡಿದ್ದೇನೆ(ಕೆಲವನ್ನು ಮೊದಲೇ ಫೇಸ್ಬುಕ್ನಲ್ಲಿ ಹಾಕಿದ್ದೆ). . .ಹೇಗನ್ನಿಸಿತು ನಿಮಗೆ??ಹೇಳಲು ಮರೆಯದಿರಿ!!
ಪ್ರಕೄತಿಯನ್ನು ಸೆರೆ ಹಿಡಿಯುವ ಪ್ರಯತ್ನ : ಹರಿಪ್ರಸಾದ್ :) 
ಕೆಳಗೂರು ಎಸ್ಟೇಟ್

ದುರ್ಗದ ಹಳ್ಳಿ

ದುರ್ಗದ ಹಳ್ಳಿ


ದುರ್ಗದ ಹಳ್ಳಿ


ದುರ್ಗದ ಹಳ್ಳಿ


ದುರ್ಗದ ಹಳ್ಳಿ


ಕೆಳಗೂರು ಎಸ್ಟೇಟ್


ಕೆಳಗೂರು ಎಸ್ಟೇಟ್


ದುರ್ಗದ ಹಳ್ಳಿ
ದುರ್ಗದ ಹಳ್ಳಿ


ಬೀಜುವಳ್ಳಿ

ಬೀಜುವಳ್ಳಿ

ಬೀಜುವಳ್ಳಿ

ಬೀಜುವಳ್ಳಿ

ಕುದ್ರೆಗುಂಡಿ


ಮುತ್ತಿಗೆಪುರ

ಹಳೇಮೂಡಿಗೆರೆ
ಮುತ್ತಿಗೆಪುರ





ಈಗ ಹೇಳಿ . . .ಮಲೆನಾಡಿಗೆ ಬರಲೇ ಬೇಕೆಂದೆನಿಸುತ್ತಿಲ್ಲವೇ????

ಶನಿವಾರ, ಡಿಸೆಂಬರ್ 17, 2011

'ಕಾಡಿನ ಸಂತ ತೇಜಸ್ವಿ'

ಚಿತ್ರ ಕೄಪೆ:ಅಂತರ್ಜಾಲ


ರಜೆಗೆ ಮನೆಗೆ ಬರುವಾಗ ನಾನು ಮೊದಲು ಹೋಗುವುದು ಅಪ್ಪನ ಆಫೀಸಿಗೆ. . .
ಅಲ್ಲಿ ಮೊದಲು ಕಣ್ಣಾಡಿಸುವುದು ಅವರ ಪುಸ್ತಕದ ಕಬೋರ್ಡಿಗೆ. .
ಸಾಮಾನ್ಯವಾಗಿ ಉಪನ್ಯಾಸ ಇತ್ಯಾದಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ತಂದೆಯವರಿಗೆ ಅನೇಕ ಅಮೂಲ್ಯ ಪುಸ್ತಕಗಳು ಉಡುಗೋರೆಯಾಗಿ ಸಿಕ್ಕಿರುತ್ತದೆ . . .
ಈ ಬಾರಿ ಎಂದಿನಂತೆ ಬಂದು ಕಣ್ಣಾಡಿಸಿದಾಗ ಸಿಕ್ಕ ಪುಸ್ತಕ ಜೀವಾಳರ 'ಕಾಡಿನ ಸಂತ ತೇಜಸ್ವಿ'. . .
ಈ ತೇಜಸ್ವಿ ಎಂಬ ಪದವನ್ನು ನೋಡಿದ ಮೇಲೆ ತಡೆಯಲಾರದ ಕುತೂಹಲ ನನ್ನಲ್ಲಿ ಆವರಿಸಿಬಿಟ್ಟಿತು. . .
ತೇಜಸ್ವಿ ಅವರ ಕೄತಿಗಳೇ ಹಾಗೆ ನೀವು ಒಂದು ಪುಟ ಓದಿದರೆ ಸಾಕು ಕೊನೆಯ ಪುಟದವರಗೆ ಓದುವತನಕ ಪುಸ್ತಕ ಬಿಟ್ಟು ಏಳಲು ಮನಸ್ಸು ಬರುವುದಿಲ್ಲ . .
ತೇಜಸ್ವಿಯವರು ಬರೆದ ಕೄತಿಗಳಂತೂ ವೈಜ್ಞಾನಿಕ . . .
ಇನ್ನು ಅವರ ಜೀವನ ಶೈಲಿ ,ಅವರ ಸಂಭಾಷಣೆಗಳನ್ನು ಓದುವುದು ಇನ್ನೂ ಚಂದ. . .
ಅವರ ಜೀವನ ಶೈಲಿಯೇ ಅಂತದ್ದು ನೋಡಿ. . .
ಅವರೊಂದಿಗೆ ನೀವು ಒಮ್ಮೆ ಮಾತಾಡಿದ್ದರೆ ಸಾಕು ಅದನ್ನು ನೀವು ಜೀವಮಾನವಿಡೀ ಮರೆಯುವ ಹಾಗಿಲ್ಲ. . .
ಯಾವುದಾದರೂ ಮಹಾನ್ ವ್ಯಕ್ತಿಗಳೊಡನೆ ಸಮಯ ಕಳೆಯುವ ಅವಕಾಶ ನಮಗೆ ಒದಗಿ ಬಂದರೆ ಅದು ನಮ್ಮ ಭಾಗ್ಯ .  .
ಅಂತಹಾ ಭಾಗ್ಯ ನನಗೊಂದು ಬಾರಿ ಒದಗಿಬಂತು. . .
ನಾನು ನಾಲ್ಕನೇ ತರಗತಿಯಲ್ಲಿದ್ದಾಗ ಹೋದ ಎರಡು ಚಾರಣ ಮರೆಯಲಸಾದ್ಯ . .  .
ಕಾರಣ ನಾನು ಚಾರಣ ಹೋದದ್ದು ನನ್ನ ನೆಚ್ಚಿನ ಲೇಖಕ ತೇಜಸ್ವಿಯೊಂದಿಗೆ.  .
ಜೀವಾಳರ ನೇಚರ್ ಕ್ಲಬ್ ಆಯೋಜಿಸಿದ್ದ ಚಾರಣಕ್ಕೆ ತಂದೆಯೊಂದಿಗೆ ನಾನು ಹೋಗಿದ್ದೆ. . .
ಎತ್ತಿನ ಭುಜ ಮತ್ತು ಗವಿ ಗುಡ್ಡ ಕಾಡಿಗೆ ಹೋಗಿದ್ದ ಚಾರಣ ನಿಜಕ್ಕೂ ಅವಿಸ್ಮರಣೀಯ , , , ಕಾರಣ ತೇಜಸ್ವಿ. . .!
ಆ ವ್ಯಕ್ತಿ ಸರಳ ಸಜ್ಜನ ವ್ಯಕ್ತಿ . . .
ಕಾಡಿನಲ್ಲಿ ಸಂಚರಿಸುತ್ತ ಬೇಸತ್ತಿದ್ದ ನಮಗೆ ತೇಜಸ್ವಿಯವರ ಸಮಯೋಚಿತ ಹಾಸ್ಯ ನಮ್ಮ ಆಯಾಸವನ್ನು ಮರೆಯಿಸುತ್ತಿತ್ತು.  . . .
ಅವರ ಸಂಭಾಷಣೆ ಹೇಗೆ ನನ್ನಲ್ಲಿ ಅಚ್ಚಳಿಯದೆ ಉಳಿದಿದೆ ಎಂದರೆ ನಾವು ಎತ್ತಿನ ಭುಜ ಚಾರಣದಿಂದ ಹಿಂದೆ ಬರುವಾಗ ಅವರು ಮರದ ಬುಡ್ಡೆಯಮೇಲೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದಾಗ ಯಾರೊ ಫೊಟೋ ಕ್ಲಿಕ್ಕಿಸಲು ಹೋದಾಗ ತೇಜಸ್ವಿ" ಈ ಫೊಟೋನ ನೋಡಿ ಯಾವನೋ ಮುದುಕ ಸತ್ತ್ ಬಿದ್ದಿದಾನೆ ಅಂತ ತಿಳ್ಕಳ್ಬೋದು ಮಾರಾಯಾ" ಎಂದಿದ್ದರು. . .
ಹೇಗೆ ಅವರ ಮಾತಿನಲ್ಲಿ ಹಾಸ್ಯ ತುಂಬಿತ್ತೋ ಹಾಗೇ ಮುಂಗೋಪಿ ಕೂಡಾ. . .
ಏನಾದರೊಂದು ಎಡವಟ್ಟು ಮಾಡಿಸಿಕೊಂಡು ಬೈಯಿಸಿಕೊಂಡವರ ಸಂಖ್ಯೆಯೇ ಹೆಚ್ಚು. . . !
ಇದೆಲ್ಲಾ ನೆನಪಾದದ್ದು ಮೊನ್ನೆ ನಾನು ಹಳೇಕೋಟೆ ರಮೇಶ್ ಅವರ ಒಂದು ಪುಸ್ತಕದಲ್ಲಿ ಇದ್ದ ಚಾರಣಕ್ಕೆ ಹೋದ ತಂಡದ ಗುಂಪು ಛಾಯಾಚಿತ್ರವನ್ನು ನೋಡಿದಾಗ. . .
ಅದರಲ್ಲಿದ್ದ ನನ್ನನ್ನು ನೋಡಿ ಅದು ನಾನೆ? ಎಂಬ ಅನುಮಾನ. . .ಅದರೊಂದಿಗೆ ಈ ಸವಿನೆನಪು :)
ಛೇ!! ನಾನು ಎಲ್ಲಿಂದ ಎಲ್ಲಿಗೆ ಹೋಗಿಬಿಟ್ಟೆ ನೋಡಿ . . .
ನಾನು ಬರೆಯಲು ಪ್ರಾರಂಭಿಸಿದ್ದು ಜೀವಾಳರ ಕೄತಿಯ ಬಗ್ಗೆ. . .
ಬರೆಯುತ್ತಿರುವುದು ನನ್ನ ಚಾರಣದ ಬಗ್ಗೆ. . .
ಇನ್ನು ಕೄತಿ ವಿಮರ್ಷೆಮಾಡಲು ನಾನೇನು ಅಷ್ಟು ದೊಡ್ಡವನಲ್ಲ ;)
ಇದು ನನ್ನ ಅನಿಸಿಕೆ. . .
ಚಿಕ್ಕವನಾಗಿದ್ದಾಗಿನಿಂದಲೂ ಪರಿಚಯವಿರುವ ಧನಂಜಯ ಜೀವಾಳರು ನಿಜಕ್ಕೂ ಪ್ರತಿಭಾವಂತರು. . .
ಅವರು ತಂದೆಯವರಿಗೆ ಕಳಿಸುವ ಶುಭಾಷಯ ಪತ್ರಗಳಂತೂ ನಿಜಕ್ಕೂ ಅದ್ಭುತ . . .
ಮೊನ್ನೆ ಊರಿಗೆ ಬಂದ ನಾನು ನಿನ್ನೆ ಸಂಜೆಯೇ ಆ ಪುಸ್ತಕವನ್ನು ಓದಿ ಮುಗಿಸಿದೆ. . .
ತೇಜಸ್ವಿಯವರೊಂದಿಗಿನ ಅನುಭವವನ್ನು ಬಹಳಾ ಚೆನ್ನಾಗಿ ಚಿತ್ರಿಸಿದ್ದಾರೆ. . .
ತೇಜಸ್ವಿಯವರ ಬಗ್ಗೆ ನಮಗೆ ಇನ್ನಷ್ಟು ತಿಳಿಸಿ ಕೊಟ್ಟ ಜೀವಾಳರೆ ನಿಮಗೆ ದನ್ಯವಾದಗಳು. . .
ನಿಮ್ಮ ಸಾಹಿತ್ಯ ಲೋಕದ ಹಾದಿ ಸುಗಮವಾಗಿರಲಿ. . !



ಶನಿವಾರ, ನವೆಂಬರ್ 12, 2011

ಗಿಂಡಿಮಾಣಿ



ನನ್ನ ಮನಸ್ಸು ಅನ್ನೋದೇ ಹೀಗೆ ನೋಡಿ. . .
ಒಮ್ಮೆ ಎನಾದರೂ ಮಾಡಬೇಕೆಂದುಕೊಳ್ಳುತ್ತೆ ಮತ್ತೆ ಇನ್ನೇನಾದರೂ ಮಾಡಿ ಬಿಡುತ್ತೆ. . 
ಈಗ ನಾನು assignment ಮಾಡಬೇಕು ಅಂತ laptop ತೆಗೆದು ಈಗ ಬ್ಲಾಗ್ ಬರಿಯುತ್ತಿದ್ದೇನೆ. . 
ಹೀಗೇ ಕ್ಲಾಸ್‌ನಲ್ಲಿಕೂಡ. .
ಗಮನವಿಟ್ಟು ಪಾಠಕೇಳಬೇಕೆಂದುಕೊಂಡರೆ ಮತ್ತೆ ನನ್ನ ಮನಸ್ಸು ಬೇರೆ ಏನನ್ನೋ ಯೊಚಿಸಲು ಪ್ರಾರಂಭಿಸಿ ಬಿಡುತ್ತೆ. . .
ಹುಚ್ಚು ಮನಸ್ಸು!!!
ಮತ್ತೆ ಹುಚ್ಚು ಮನಸ್ಸಿನ ಬಗ್ಗೆ ಪುರಾಣವೇ ಎಂದು ಕೇಳಬೇಡಿ,. . .
ಇದು ನನ್ನ ಹುಚ್ಚು ಮನಸ್ಸಿನ ಸಮಸ್ಯೆ. . 
ತನ್ನ ಬಗ್ಗೆ ಹೊಗಳಿಕೊಳ್ಳುವ ಒಂದು ಹುಚ್ಚು ಆಸೆ!!
ಮನಸ್ಸು ಹೇಳಿದಂತೆ ಕೇಳುವ ಗಿಂಡಿಮಾಣಿ ನಾನು. . .!
ಇನ್ನೂ ಒಂದು ಒಳ್ಳೆ ಉದಾಹರಣೆ ಎಂದರೆ ನನ್ನ ಹವ್ಯಾಸಗಳ ವಲಸೆ. . .
ಕೆಲವರು ಒಂದು ಊರು ಹಿಡಿಸದ್ದರೆ ಬೇರೆ ಊರಿಗೆ ವಲಸೆ ಹೋದಂತೆ ನನ್ನ ಹವ್ಯಾಸಗಳ ವಲಸೆ ಬಹಳವಿತ್ತು. . .
ಚಂಚಲ ಮನಸ್ಸಿನ ನಾನು ಸಾದಾರಣವಾಗಿ ಎಲ್ಲ ಕಲೆಗಳ ಪರಿಚಯಮಾಡಿಕೊಂಡವನು. . . 
ನಾನು ಸಣ್ಣವಯಸ್ಸಿನಲ್ಲೆ ಚಿಕ್ಕಮ್ಮನೊಂದಿಗೆ ಶಾಸ್ತ್ರೀಯ ಸಂಗೀತ ತರಗತಿಗೆ ಹೋಗಿ ಕೊಂಡಿದ್ದೆ ಮುಂದೆ ಕಾರಣಾಂತರದಿಂದ ಎರಡನೇತರಗತಿಗೆ ಮೂಡಿಗೆರೆಗೆ ಹೋಗಬೇಕಾಗಿ ಬಂದಿತು . . .
ಅಲ್ಲಿ ನಾನು ಅಪ್ಪ ಬರೆದು ಕೊಡುತ್ತಿದ್ದ ಭಾಷಣವನ್ನು ಓದಿ ನಾಲ್ಕನೇ ತರಗತಿಯವರಗೆ ಭಾಷಣ ಕಲೆಯನ್ನು ಕಲಿತುಕೊಂಡೆ. . .
ಮುಂದೆ ಐದನೇ ತರಗತಿಗೆ ಅಜ್ಜಿ ಮನೆಗೆ ಬಂದೆ ಆಗ ನನಗೆ ಶುರುವಾದದ್ದು ವಯೋಲಿನ್ ಹುಚ್ಚು . . . 
ವಯೋಲಿನ್ ತರಗತಿಯನ್ನು ಆರನೇತರಗತಿಗೆ ಬೆಳ್ತಂಗಡಿಗೆ ಬಂದ ಮೇಲೂ ಏಳನೇ ತರಗತಿಯವರೆಗೂ ಮುಂದುವರಿಸಿದರೂ ಏಳನೇತರಗತಿಗೆ ಗುರುಗಳ ಕೊರತೆಯಿಂದ ಅದನ್ನೂ ಕೈ ಬಿಡಬೇಕಾಗಿ ಬಂತು. . 
ಮುಂದೆ ಅದೇ ಶಾಲೆಯಲ್ಲಿದ್ದ ಕರಾಟೆ ತರಗತಿಗೆ ಸೇರಿದ ನಾನು ಅಲ್ಲಿ ತಿಂದ ಒಂದು ಹೊಡೆತದಿಂದ ಬದುಕಿದೆಯಾ ಬಡ ಜೀವವೇ ಎಂದುಕೊಳ್ಳುತ್ತಾ ಮತ್ತೆಂದೂ ಅತ್ತ ತಲೆ ಹಾಕದವನು. . .
ಇನ್ನು ಎಂಟನೇ ತರಗತಿಗೆ ಆಂಗ್ಲಮಾಧ್ಯಮ ಶಾಲೆ ಸೇರಿದ ನಾನು ಕಬ್ಬಿಣದ ಕಡಲೆಯಂತಿದ್ದ ಇಂಗ್ಲೀಷನ್ನುಕಂಡು ಬೆವತುಕೊಂಡೆನಾದರೂ ಅಲ್ಲೂ ನನ್ನ ಹುಚ್ಚು ಮನಸ್ಸು ಏನಾದರೂ ಮಾಡಬೇಕೆಂದು ಕೊಂಡು ಭರತನಾಟ್ಯಕ್ಕೆ ಸೇರಿಕೊಂಡೆ. . . 
ಅಲ್ಲಿದ್ದದ್ದು ಕೇವಲ ನಾನೊಬ್ಬನೇ ಹುಡುಗ. . . .!
 ಎರಡು ಮೂರು ತಿಂಗಳು ತರಗತಿಗೆ ಹೋದ ನಾನು ಮುಂದೆ ನಾನು ಮುಜುಗರಕ್ಕೊಳಗಾಗಿ ಅದನ್ನೂ ಕೈ ಬಿಟ್ಟೆ . . .
ಹತ್ತನೇ ತರಗತಿಗೆ ಮತ್ತೆ ಒಂದು ಹುಚ್ಚು ಸಾಹಸ!
ಎರಡು ವರ್ಷ ಆಂಗ್ಲಮಾದ್ಯಮಕ್ಕೆ ಹೋದ ನಾನು ಹತ್ತನೇತರಗತಿಗೆ ಕನ್ನಡ ಮಾಧ್ಯಮ ಶಾಲೆಗೆ ಸೇರಿದೆ!!!
ಇನ್ನು ಪಿ ಯು ಸಿ ಯನ್ನು ಹಾಸ್ಟೆಲ್‍ನಲ್ಲಿ ಕಳೆದ ನನ್ನ ಹುಚ್ಚು ಸಾಹಸಗಳೆಲ್ಲ ಸಾದಾರಣವಾಗಿ ನಿಂತು ಹೋಯಿತು. . .
ಪಿ ಯು ಸಿ ರಜೆಯಲ್ಲಿ ಚಿತ್ರಕಲೆಗೆ ಕೈ ಹಾಕಿ ಮತ್ತೆ ಕೈ ಹಿಂತೆಗೆದುಕೊಂಡೆ . ..
ಇನ್ನು ನಾಟಕ ಕಲೆನನ್ನ ನೆಚ್ಚಿನ ಕಲೆ. .. 
ಅದಕ್ಕೆ ಯಾರು ಗುರುಗಳು ಬೇಕಿಲ್ಲ ನನಗೆ!
ನೀವು ನನ್ನ ಲೇಖನವನ್ನು ಸೂಕ್ಷ್ಮವಾಗಿ ಗಮನಿಸಿದ್ದರೆ ಒಟ್ಟು ನಾನು ಬದಲಿಸಿದ ಶಾಲೆಗಳ ಸಂಖ್ಯೆ ಈಗದ್ದೂ ಸೇರಿ ೮. .  
ಈಗ ಹೇಳಿ ನಿಮಗೆ ನಾನು ಅಲೆಮಾರಿಯಂತನಿಸುತ್ತಿಲ್ಲವೇ??????!!!!